'ವ್ಯಾಟ್ಸ್‌ಅಪ್‌ ಸ್ಟೇಟಸ್‌' ಡೆತ್ ನೋಟ್: ಜನ್ಮದಿನವೇ ಆತ್ಮಹತ್ಯೆ

ಗುರುವಾರ, 3 ಸೆಪ್ಟಂಬರ್ 2015 (11:20 IST)
13 ವರ್ಷದ ಬಾಲಕನೊಬ್ಬ ತನ್ನ ಜನ್ಮದಿನವೇ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನವದೆಹಲಿಯಲ್ಲಿ ನಡೆದಿದೆ. ಸಾವಿಗೆ ಶರಣಾಗುವ ಮುನ್ನ ಬಾಲಕ ವ್ಯಾಟ್ಸ್‌ಅಪ್‌ನಲ್ಲಿ ಡೆತ್ ನೋಟ್ ಬರೆದಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 
 

 
ತನ್ನ ತಂದೆತಾಯಿಗಳು ದೂರವಾಗಿರುವುದೇ ಬಾಲಕ ಆತ್ಮಹತ್ಯೆಗೆ ಶರಣಾಗಲು ಕಾರಣವಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. 
 
ಮೃತನನ್ನು ಸ್ವಮೀಮ್ ಎಂದು ಗುರುತಿಸಲಾಗಿದ್ದು, ಆತ ಗಾಜಿಯಾಬಾದ್‌ನಲ್ಲಿ 9 ನೇ ತರಗತಿಯಲ್ಲಿ ಓದುತ್ತಿದ್ದು ಸಹೋದರನ ಜತೆ ಅಜ್ಜನ ಮನೆಯಲ್ಲಿ ವಾಸವಾಗಿದ್ದ. 
 
ಕಳೆದ ಮಂಗಳವಾರ ತನ್ನ ಹುಟ್ಟುಹಬ್ಬವನ್ನಾಚರಿಸಿಕೊಳ್ಳಲು ಆತ ತನ್ನ ಅಣ್ಣ ಶಿಖರ್ ಜತೆಯಲ್ಲಿ ವಾಯುವ್ಯ ದೆಹಲಿಯಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಬಂದಿದ್ದ. ರಾತ್ರಿ ಅಣ್ಣ ಶಿಖರ್ ಜತೆ ಮಲಗಿದ್ದ ಆತ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರ ನಡುವಿನ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 14 ನೇ ವರ್ಷದ ಹುಟ್ಟುಹಬ್ಬದ ದಿನವೇ ಆತ ಸಾವಿಗೆ ಶರಣಾಗಿದ್ದು ಕುಟುಂಬ ಸದಸ್ಯರನ್ನು ಆಘಾತಕ್ಕೆ ತಳ್ಳಿದೆ. 
 
12 ಗಂಟೆಗೆ ಸ್ವಮೀಮ್ ಸಹೋದರ ಶಿಖರ್ ಮತ್ತು ಚಿಕ್ಕಮ್ಮನ ಮಕ್ಕಳೆಲ್ಲ ಆತನಿಗೆ ಹುಟ್ಟುಹಬ್ಬದ ಶುಭಾಶಯವನ್ನು ಹೇಳಿ ನಿದ್ದೆಗೆ ಜಾರಿದ್ದರು. ಕೆಲ ಹೊತ್ತಿನಲ್ಲಿ ಆತನ ಕಸಿನ್ ನೀರು ಕುಡಿಯಲೆಂದು ಎದ್ದಾಗ ಸ್ವಮೀಮ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ತಕ್ಷಣ ಆತನನ್ನು ಕೆಳಕ್ಕಿಳಿಸಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತನಾಗಲೇ ಕೊನೆಯುಸಿರೆಳೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 
 
ಆತ್ಮಹತ್ಯೆಗೂ ಮುನ್ನ ಸ್ವಮೀಮ್ ತನ್ನ 'ವ್ಯಾಟ್ಸ್‌ಅಪ್‌ ಸ್ಟೇಟಸ್'ನಲ್ಲಿ 'ಸ್ನೇಹಿತರೇ ನನ್ನ ಬದುಕಿನ  ಬಹುಮುಖ್ಯ ಭಾಗಗಳು. ಆದರೆ ಮಾನವ ಸಂಬಂಧಕ್ಕಿಂತ ಹಣಕ್ಕೆ ಹೆಚ್ಚು ಬೆಲೆ ನೀಡುವ ಈ ಜಗತ್ತಿನಲ್ಲಿ ನಾನು ಬದುಕಲು ಬಯಸುವುದಿಲ್ಲ', ಎಂದು ಬರೆದಿದ್ದಾನೆ ಎಂದು ತನಿಖೆ ವೇಳೆ ಪೊಲೀಸರು ಪತ್ತೆ ಹಚ್ಚಿದ್ದಾರೆ. 
 
ಆತನ ತಾಯಿ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ತಂದೆ ದೆಹಲಿಯಲ್ಲಿರುತ್ತಾರೆ. ಇದು ಆತನ ಮುಗ್ಧ ಮನಸ್ಸನ್ನು ಘಾಸಿಗೊಳಿಸಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೂ ಯಾವ ಕಾರಣಕ್ಕೆ ಆತ ಈ ಆತುರದ ಹಾದಿ ತುಳಿದ ಎಂದು ತಿಳಿದುಕೊಳ್ಳಲು ಪೊಲೀಸರು ಆತನ ಸ್ನೇಹಿತರನ್ನು ವಿಚಾರಣೆಗೊಳಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ