ಲಾಲು ಪುತ್ರ ತೇಜಸ್ವಿ ಯಾದವ್‌ಗೆ ಉಪ ಮುಖ್ಯಮಂತ್ರಿ ಪಟ್ಟ?

ಗುರುವಾರ, 19 ನವೆಂಬರ್ 2015 (19:17 IST)
ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದು, ಲಾಲು ಪುತ್ರ ತೇಜಸ್ವಿ ಯಾದವ್ ಉಪಮುಖ್ಯಮಂತ್ರಿಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
 
ಮಾಧ್ಯಮ ವರದಿಗಳ ಪ್ರಕಾರ, ಆರ್‌ಜೆಡಿ ಶಾಸಕಾಂಗ ಸಭೆ ತೇಜಸ್ವಿ ಯಾದವ್ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಿದೆ.
 
ಮಹಾಮೈತ್ರಿಕೂಟದಲ್ಲಿ ಆರ್‌ಜೆಡಿ ಪಕ್ಷದ 80 ಶಾಸಕರು, ಜೆಡಿಯು 71 ಶಾಸಕರು ಮತ್ತು ಕಾಂಗ್ರೆಸ್ ಪಕ್ಷದಿಂದ 27 ಶಾಸಕರಿದ್ದಾರೆ. 
 
ಕಾಂಗ್ರೆಸ್ ಪಕ್ಷ ಬಿಹಾರ್ ವಿಧಾನಸಭೆ ಸಭಾಪತಿ ಸ್ಥಾನ ನೀಡುವಂತೆ, ಜೆಡಿಯು ಮತ್ತು ಆರ್‌‌ಜೆಡಿ ನಾಯಕರನ್ನು ಒತ್ತಾಯಿಸಲಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
 
ಕಾಂಗ್ರೆಸ್ ಮೂಲಗಳ ಪ್ರಕಾರ ಒಂಬತ್ತು ಬಾರಿ ಶಾಸಕರಾಗಿ ಆಯ್ಕೆಯಾದ ಸದಾನಂದ್ ಸಿಂಗ್ ಅವರನ್ನು ಸಭಾಪತಿ ಸ್ಥಾನಕ್ಕಾಗಿ ಆಯ್ಕೆ ಮಾಡುವ ಸಾಧ್ಯತೆಗಳಿವೆ. ಕಾಂಗ್ರೆಸ್ ಪಕ್ಷ, 2000-2005ರಲ್ಲಿ ರಾಬ್ಡಿದೇವಿ ಸರಕಾರದೊಂದಿಗೆ ಸೇರಿದ್ದಾಗ ಸಿಂಗ್ ಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದರು.
 
ಆದರೆ, ಜೆಡಿಯು ಮತ್ತು ಆರ್‌ಜೆಡಿ ಪಕ್ಷಗಳೂ ಕೂಡಾ ಸಭಾಪತಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದರಿಂದ ಸಭಾಪತಿ ಸ್ಥಾನ ಪಡೆಯುವುದು ಕಾಂಗ್ರೆಸ್ ಪಕ್ಷಕ್ಕೆ ಸುಲಭದ ತುತ್ತಲ್ಲ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ