ಐದು ಕೋಟಿ ಮೌಲ್ಯದ ಐಷಾರಾಮಿ ಬುಲೆಟ್ ಪ್ರೂಫ್ ಬಸ್ ಖರೀದಿಸಿದ ತೆಲಂಗಾಣಾ ಸಿಎಂ

ಶುಕ್ರವಾರ, 3 ಜುಲೈ 2015 (15:11 IST)
ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ 5 ಕೋಟಿ ರೂಪಾಯಿ ವೆಚ್ಚದಲ್ಲಿ ಬುಲೆಟ್ ಪ್ರೂಫ್ ಬಸ್ ಖರೀದಿಸಿರುವುದು ಹಣವನ್ನು ವ್ಯರ್ಥ ಮಾಡಿದಂತೆ ಎಂದು ವಿಪಕ್ಷವಾದ ಕಾಂಗ್ರೆಸ್ ಆರೋಪಿಸಿದೆ. 
 
ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ರಾಜ್ಯದಾದ್ಯಂತ ಪ್ರವಾಸ ಮಾಡಲು ಬುಲೆಟ್ ಪ್ರೂಫ್ ಬಸ್ ಖರೀದಿಸಿದ್ದಾರೆ. ಪ್ರವಾಸಕ್ಕಾಗಿ 5 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಬಸ್‌ನ ಅಗತ್ಯವಿತ್ತೆ? ರಾಜ್ಯದಲ್ಲಿ ಬಡವರಿಗಾಗಿ 5 ಕೋಟಿ ಹಣ ಬಳಸಬಹುದಿತ್ತು ಎಂದು ಹಿರಿಯ ಕಾಂಗ್ರೆಸ್ ನಾಯಕ ವಿ.ಹನುಮಂತ್ ರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  
 
ಐದು ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಬಸ್ ಯಾವುದೇ ರೀತಿಯ ದಾಳಿಯನ್ನು ತಡೆಯಲು ಸಶಕ್ತವಾಗಿದೆ. ಬಸ್‌ನಲ್ಲಿ ಬೆಡ್ ರೂಮ್, ವಿಶ್ರಾಂತಿ ಕೋಣೆ, ಸಭೆ ನಡೆಸುವ ಹಾಲ್, ಇಂಟರ್ನೆಟ್ ಸೇರಿದಂತೆ ಅನೇಕ ಐಷಾರಾಮಿ ಸೌಲಭ್ಯಗಳನ್ನು ಅಳವಡಿಸಲಾಗಿದೆ.  
 
ಮುಖ್ಯಮಂತ್ರಿ ರಾವ್ ಪ್ರಸ್ತುತ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲು ಹೆಲಿಕಾಪ್ಟರ್ ಬಳಸುತ್ತಿದ್ದಾರೆ. ಯಾವುದೇ ಕಾರ್ಯಕ್ರಮವಿರಲಿ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವುದು ಹವ್ಯಾಸವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
 
ತೆಲಂಗಾಣ ಪ್ರತ್ಯೇಕ ರಾಜ್ಯವಾದ ನಂತರ ಬಡವರಿಗೆ, ಶೋಷಿತರಿಗಾಗಿ ರಾಜಕೀಯ ಸೇವೆ ಸಲ್ಲಿಸುತ್ತೇನೆ ಎಂದು ಅಧಿಕಾರಕ್ಕೇರಿದ ಮುಖ್ಯಮಂತ್ರಿ ಚಂದ್ರಶೇಖರ್ ರಾವ್, ಇದೀಗ ಬಡವರನ್ನು, ಶೋಷಿತರನ್ನು ಮರೆತು ಐಷಾರಾಮಿ ಜೀವನಕ್ಕೆ ಮೊರೆಹೋಗುತ್ತಿರುವುದು ವಿಷಾದಕರ ಸಂಗತಿಯಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ