ಗಂಗಾ ನದಿ ಯಾವ ಸ್ಥಳದಲ್ಲಿ ಶುದ್ದವಾಗಿದೆ ತೋರಿಸಿ: ಕೇಂದ್ರ ಸರಕಾರಕ್ಕೆ ಎನ್‌ಜಿಟಿ

ಶನಿವಾರ, 10 ಅಕ್ಟೋಬರ್ 2015 (18:26 IST)
ಗಂಗಾ ನದಿ ಸ್ವಚ್ಚತಾ ಅಭಿಯಾನಕ್ಕಾಗಿ ನಾಲ್ಕು ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಆದರೆ, ಗಂಗಾ ನದಿ ಸ್ವಚ್ಚವಾಗಿರುವ ಒಂದು ಸ್ಥಳದ ಬಗ್ಗೆ ನಮಗೆ ಮಾಹಿತಿ ಕೊಡಿ. ಪರಿಸ್ಥಿತಿ ಹಿಂದಿಗಿಂತಲೂ ಕೆಟ್ಟದಾಗಿದೆ ಎಂದು ಕೇಂದ್ರ ಸರಕಾರಕ್ಕೆ ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್ ಆಕ್ರೋಶ ವ್ಯಕ್ತಪಡಿಸಿದೆ. 
 
ಗಂಗಾ ನದಿ ಸ್ವಚ್ಚತೆಯ ಬಗ್ಗೆ ಕೇಂದ್ರ ಸರಕಾರ ತೋರುತ್ತಿರುವ ನಿರ್ಲಕ್ಷ್ಯ ಮನೋಭಾವವನ್ನು ನೋಡಿದಲ್ಲಿ, ಗಂಗಾ ನದಿ ಸ್ವಚ್ಚತಾ ಅಭಿಯಾನ ಕೇವಲ ಪ್ರಚಾರದಲ್ಲಿದೆ. ವಾಸ್ತವತೆಯಲ್ಲಿ ಇಲ್ಲ ಎಂದು ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
 
ಕಳೆದ 1985ರಿಂದ 2014ರ ವರೆಗೆ ಗಂಗಾ ನದಿ ಸ್ವಚ್ಚತೆಗಾಗಿ ಅಂದಾಜು 4 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ ಎಂದು ಜಲ ಸಂಪನ್ಮೂಲ ಖಾತೆ ಸಚಿವಾಲಯದ ಪ್ರತಿನಿಧಿ, ಗ್ರೀನ್ ಪ್ಯಾನೆಲ್ ಮುಂದೆ ತಿಳಿಸಿದ್ದಾರೆ.
 
ಸುಪ್ರೀಂಕೋರ್ಟ್ ಈಗಾಗಲೇ ಗಂಗಾ ನದಿಯನ್ನು ಕಲುಷಿತಗೊಳಿಸುತ್ತಿರುವ ಕೈಗಾರಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ತಮ್ಮ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದ್ದರಿಂದ ಯೋಜನೆ ವಿಫಲವಾಗಿದೆ ಎಂದು ಗ್ರೀನ್ ಪ್ಯಾನೆಲ್ ಆಕ್ರೋಶ ವ್ಯಕ್ತಪಡಿಸಿದೆ.
 
ಗಂಗಾ ನದಿ ಸ್ವಚ್ಚತೆಗಾಗಿ 5000 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿ ಮತ್ತಷ್ಟು ಕಲುಷಿತಗೊಳಿಸಿದ್ದೀರಿ. ಕೇಂದ್ರ ಸರಕಾರ ವೆಚ್ಚ ಮಾಡಿದೆಯೇ ಅಥವಾ ರಾಜ್ಯ ಸರಕಾರ ವೆಚ್ಚ ಮಾಡಿದೆಯೇ ಎನ್ನುವುದು ತಿಳಿಯುವ ಅಗತ್ಯವಿಲ್ಲ. 2500 ಕಿ.ಮೀ ಉದ್ದದ ಗಂಗಾ ನದಿ ಹರಿಯುವ ಯಾವುದೇ ಒಂದು ಸ್ಥಳ ಸ್ವಚ್ಚವಾಗಿದೆ ಎನ್ನುವುದು ವಿವರಿಸಿ ಎಂದು ನ್ಯಾಷನಲ್ ಗ್ರೀನ್ ಪೀಸ್ ಸಮಿತಿ ಮುಖ್ಯಸ್ಥ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ಕೇಂದ್ರ ಸರಕಾರಕ್ಕೆ ಚಾಟಿ ಏಟು ಬೀಸಿದರು. 

ವೆಬ್ದುನಿಯಾವನ್ನು ಓದಿ