ಜಮ್ಮು ಕಾಶ್ಮಿರ: ಉಗ್ರರ ಅಟ್ಟಹಾಸಕ್ಕೆ ಮೂವರು ಯೋಧರು ಹುತಾತ್ಮ

ಶುಕ್ರವಾರ, 3 ಜೂನ್ 2016 (20:04 IST)
ಜಮ್ಮು ಕಾಶ್ಮಿರದ ಬಿಜ್‌ಬೆಹರಾ ಪ್ರದೇಶದಲ್ಲಿ ಬಿಎಸ್‌ಎಫ್ ವಾಹನಗಳ ಮೇಲೆ ಉಗ್ರರು ದಾಳಿ ನಡೆಸಿದಾಗ ಮೂವರು ಯೋಧರು ಹುತಾತ್ಮರಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
 
ಬಿಎಸ್‌ಎಫ್ ಯೋಧರು ವಾಹನಗಳಲ್ಲಿ ತೆರಳುತ್ತಿದ್ದಾಗ ಅಕಸ್ಮಿಕ ದಾಳಿ ನಡೆಸಿದ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದಾಗ ಮೂವರು ಯೋಧರು ಬಲಿಯಾಗಿದ್ದಾರೆ. 
 
ಉಗ್ರರು ಗೆರಿಲ್ಲಾ ಮಾದರಿಯ ದಾಳಿ ನಡೆಸಿದಾಗ ಸೇನಾ ಯೋಧರು ಸೇರಿದಂತೆ ಮೂವರು ನಾಗರಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಉಗ್ರರು ದಾಳಿ ನಡೆಸಿದ ನಂತರ ತಿರುಗೇಟು ನೀಡಿದ ಯೋಧರು ಗುಂಡಿನ ದಾಳಿ ನಡೆಸಿದಾಗ ಭಾರಿ ಪ್ರಮಾಣದಲ್ಲಿ ಗುಂಡಿನ ಚಕಮಕರಿ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 
 
ಘಟನೆಯಲ್ಲಿ ಗಾಯಗೊಂಡ ಯೋಧರನ್ನು ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. 
 
ಉಗ್ರರು ಉಪಜಿಲ್ಲಾ ಆಸ್ಪತ್ರೆಯ ಕಟ್ಟಡದಲ್ಲಿ ಅವಿತುಕೊಂಡು ದಾಳಿ ನಡೆಸಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
 
ಪ್ರತ್ಯಕ್ಷದರ್ಶಿಗಳ ಪ್ರಕಾರ ಉಗ್ರರ ದಾಳಿಯ ನಂತರ ಪ್ರದೇಶವನ್ನು ಸುತ್ತುವರಿದ ಭದ್ರತಾ ಪಡೆಗಳು ಉಗ್ರರ ಹುಡುಕಾಟದಲ್ಲಿ ತೊಡಗಿದ್ದರಿಂದ ಜಮ್ಮು ಕಾಶ್ಮಿರ್ ಹೆದ್ದಾರಿಯಲ್ಲಿ ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು ಎಂದು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ