ಮುಂಬೈ: ಕಟ್ಟಡ ಕುಸಿದು 11 ಸಾವು

ಮಂಗಳವಾರ, 4 ಆಗಸ್ಟ್ 2015 (09:51 IST)
ಮಹಾರಾಷ್ಟ್ರದ ಥಾಣೆಯ ನೌಪಾಡದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದ ಪರಿಣಾಮ 11 ಜನರು ದುರಂತ ಸಾವನ್ನಪ್ಪಿದ್ದಾರೆ. ಇನ್ನೂ ಕೆಲವರು ಕಟ್ಟಡದ ಅವಶೇಷಗಳಡಿ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ. ಗಾಯಗೊಂಡ 16 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಶೇಷಗಳಡಿ ಸಿಲುಕಿದ್ದ 15 ಜನರನ್ನು ರಕ್ಷಿಸಲಾಗಿದೆ .

ಕೃಷ್ಣನಿವಾಸ ಎಂಬ ಹೆಸರಿನ ಈ ಕಟ್ಟಡ 50 ವರ್ಷಗಳಷ್ಟು ಹಳೆಯದೆಂದು ಹೇಳಲಾಗುತ್ತಿದೆ.  
 
ರಾಷ್ಟ್ರೀಯ ವಿಪತ್ತು ನಿರ್ವಹಣಾ, ಅಗ್ನಿಶಾಮಕ ದಳದವರು ಧಾವಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಈ ಮಧ್ಯೆ ಭಾರಿ ಮಳೆ ಸುರಿಯುತ್ತಿರುವುದು ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವರು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. 
 
ಕಟ್ಟಡ ಶಿಥಿಲವಾಗಿದ್ದು ತೆರವು ಮಾಡಿ ಎಂದು ಮಹಾನಗರಪಾಲಿಕೆ ಕಟ್ಟಡದ ಮಾಲಿಕರಿಗೆ ಹಲವು ಬಾರಿ ನೋಟಿಸ್ ಹಾಗೂ ಎಚ್ಚರಿಕೆಯನ್ನು ನೀಡಿತ್ತು. ಆದರೂ ಅದನ್ನು ಲೆಕ್ಕಿಸದೇ ವಾಸವನ್ನು ಮುಂದುವರೆಸಲಾಗಿತ್ತು ಎಂದು ಹೇಳಲಾಗುತ್ತಿದೆ. 
 
ಕಳೆದ ವಾರವಷ್ಟೇ ಥಾಣೆಯ ಥಾಕುರ್ಲಿಯಲ್ಲಿ ಕಟ್ಟಡ ಕುಸಿದು 9 ಜನರು ದುರ್ಮರಣವನ್ನಪ್ಪಿದ್ದರು.  ಒಂದೇ ವಾರದ ಅವಧಿಯಲ್ಲಿ ಥಾಣೆಯಲ್ಲಿ ನಡೆದ ಎರಡನೇ ಕಟ್ಟಡ ಕುಸಿತದ ದುರಂತ ಇದಾಗಿದೆ. 

ವೆಬ್ದುನಿಯಾವನ್ನು ಓದಿ