ವಿದೇಶಿ ಬ್ಯಾಂಕ್‌ನಲ್ಲಿ ಅಕ್ರಮ ಖಾತೆ: ರಾಜಕೀಯ ಕುಟುಂಬದ ಕುಡಿಯ ಹೆಸರು

ಗುರುವಾರ, 23 ಅಕ್ಟೋಬರ್ 2014 (17:55 IST)
ಎನ್‌ಡಿಎ ಸರ್ಕಾರ ವಿದೇಶಿ ಬ್ಯಾಂಕ್‌ಗಳಲ್ಲಿ ಅಕ್ರಮ ಖಾತೆ ಹೊಂದಿರುವ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಆರಂಭಿಸಿದ್ದು, ಕೆಲವು ಪ್ರಮುಖ ರಾಜಕಾರಣಿಗಳು ಈ ಪಟ್ಟಿಯಲ್ಲಿದ್ದಾರೆಂಬ ಊಹಾಪೋಹಕ್ಕೆ ಎಡೆಮಾಡಿದೆ.
 
ಒಬ್ಬ ವಿದೇಶಿ ಖಾತೆದಾರನ ವಿರುದ್ಧ ಪ್ರಾಸಿಕ್ಯೂಷನ್ ಕ್ರಮ ಆರಂಭಿಸಿದ್ದು, ಎಚ್‌ಎಸ್‌ಬಿಸಿ ಜಿನೀವಾ ಪಟ್ಟಿಯಲ್ಲಿರುವ ಇನ್ನೂ 15-20 ಜನರ ವಿರುದ್ಧ ಕ್ರಮ ವಿಸ್ತರಿಸುತ್ತದೆಂದು ತಿಳಿದುಬಂದಿದೆ. ಸ್ವಿಸ್ ಅಧಿಕಾರಿಗಳು ಪಟ್ಟಿಯಲ್ಲಿರುವ ವ್ಯಕ್ತಿಗಳ ಗುರುತುಗಳನ್ನು ದೃಢಪಡಿಸಿದ್ದಾರೆ. ಖಾತೆದಾರರ ವಿರುದ್ಧ ದೋಷಾರೋಪ ಹೊರಿಸಿದ ನಂತರವೇ ಕೋರ್ಟ್‌ನಲ್ಲಿ ಖಾತೆದಾರರ ಹೆಸರನ್ನು ಬಹಿರಂಗಪಡಿಸಬೇಕೆಂಬ ಷರತ್ತನ್ನು ಸ್ವಿಸ್ ಅಧಿಕಾರಿಗಳು ವಿಧಿಸಿದ್ದು, ಆ ಷರತ್ತನ್ನು ಪ್ರಾಸಿಕ್ಯೂಷನ್ ಪಾಲಿಸಬೇಕಾಗಿದೆ.
 
ಆದಾಯ ತೆರಿಗೆ ಇಲಾಖೆಯ ಪ್ರಾಸಿಕ್ಯೂಷನ್ ವಿಧಿವಿಧಾನಗಳಿಂದ ವಿದೇಶಿ ಬ್ಯಾಂಕ್ ಖಾತೆದಾರರ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದ್ದು, ಮಾಜಿ ಕೇಂದ್ರ ಸಚಿವರು ಮತ್ತು ಪ್ರಮುಖ ಉದ್ಯಮದೊಂದಿಗೆ ಕುಟುಂಬದ ಸಂಪರ್ಕ ಹೊಂದಿರುವ ಮಾಜಿ ಸಂಸದರೊಬ್ಬರ ಪುತ್ರ ಮತ್ತು ರಾಜಕೀಯ ಕುಟುಂಬದ ಕುಡಿಯ ಹೆಸರು ಕೂಡ ಕೇಳಿಬರುತ್ತಿದೆ.

ಲೈಕ್‌ಟೆನ್‌ಸ್ಟೈನ್ ಬ್ಯಾಂಕ್‌ನ ಅಕ್ರಮ ಖಾತೆಯನ್ನು ಹೊಂದಿರುವ 19 ಜನರ ಹೊಸ ಪಟ್ಟಿಯನ್ನು ದೀಪಾವಳಿಯ ನಂತರ ಸುಪ್ರೀಂಕೋರ್ಟ್‌ನಲ್ಲಿ ಬಿಡುಗಡೆ ಮಾಡುವುದಾಗಿ ಮೂಲಗಳು ಹೇಳಿದ್ದು, ಇದರ ಹಿಂದೆಯೇ ಎಚ್‌ಎಸ್‌ಬಿಸಿ ಪಟ್ಟಿಯಲ್ಲಿರುವ 20 ಜನರ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. 

ವೆಬ್ದುನಿಯಾವನ್ನು ಓದಿ