ಶಾಂತಕುಮಾರ್ ಎಫೆಕ್ಟ್: ಬಿಜೆಪಿ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಕಟ್ಟಾಜ್ಞೆ

ಬುಧವಾರ, 22 ಜುಲೈ 2015 (17:50 IST)
ಮೂವರು ಬಿಜೆಪಿ ನಾಯಕರುಗಳ ರಾಜೀನಾಮೆಗೆ ಒತ್ತಾಯಿಸಿ ಸಂಸತ್ ಕಲಾಪ ರದ್ದುಗೊಂಡ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಇಂದು ಸಂಸದರನ್ನು ಭೇಟಿ ಮಾಡಿ ಸಾರ್ವಜನಿಕವಾಗಿ ಹೇಳಿಕೆ ನೀಡುವ ಮುನ್ನ ನಾಯಕರೊಂದಿಗೆ ಸಂಪರ್ಕಿಸಿ ಎಂದು ಸಂಸದರಿಗೆ ಕಟ್ಟಾಜ್ಞೆ ಜಾರಿ ಮಾಡಿದ್ದಾರೆ.
 
ಕೇಂದ್ರ ಸರಕಾರದ ನಿಲುವಿನ ವಿರುದ್ಧ ತಪ್ಪು ಮಾಹಿತಿ ಹರಡಿಸುವ ಅಗತ್ಯವಿಲ್ಲ. ವಿಪಕ್ಷಗಳನ್ನು ಯಾವ ರೀತಿ ನಿಯಂತ್ರಿಸಬೇಕು ಎನ್ನುವುದು ಬಿಜೆಪಿಗೆ ಗೊತ್ತಿದೆ ಎಂದು ಹೇಳಿದ್ದಾರೆ.
 
ಲಲಿತ್‌ಗೇಟ್ ಮತ್ತು ವ್ಯಾಪಂ ಹಗರಣದಿಂದ ಕೇಂದ್ರ ಸರಕಾರದ ಮತ್ತು ಬಿಜೆಪಿ ಪಕ್ಷದ ಇಮೇಜಿಗೆ ಧಕ್ಕೆಯಾಗಿದೆ. ಇದರಿಂದ ಬಿಜೆಪಿ ನಾಯಕರೆಲ್ಲರು ತಲೆತಗ್ಗಿಸುವಂತಾಗಿದೆ ಎಂದು ಹಿಮಾಚಲ ಪ್ರದೇಶದ ಸಂಸದ ಶಾಂತಕುಮಾರ್, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ಪತ್ರ ಬರೆದ ನಂತರ ಮೋದಿ ಹೇಳಿಕೆ ಹೊರಬಿದ್ದಿದೆ.  
 
ಬಿಜೆಪಿಯ ಮೂವರು ನಾಯಕರ ರಾಜೀನಾಮೆಗೆ ವಿಪಕ್ಷಗಳು ಒತ್ತಾಯಿಸುತ್ತಿರುವ ಮಧ್ಯೆ ಬಿಜೆಪಿ ಸಂಸದ ಶಾಂತಕುಮಾರ್ ಫೇಸ್‌ಬುಕ್‌ನಲ್ಲಿ ಅಮಿತ್ ಶಾಗೆ ಬರೆದ ಪತ್ರ ಪೋಸ್ಟ್ ಮಾಡಿರುವುದು ಬಿಜೆಪಿ ಹೈಕಮಾಂಡ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. 
 
ಬಿಜೆಪಿ ಪಕ್ಷದ ಯಾವ ಸಚಿವರು ಕಾನೂನುಬಾಹಿರವಾಗಿ ಅಥವಾ ನೈತಿಕವಾಗಿ ತಪ್ಪು ಮಾಡಿಲ್ಲ ಎಂದು ಬಿಜೆಪಿ ಮುಖಂಡರು ಘೋಷಿಸುತ್ತಿರುವ ಮಧ್ಯೆ ಶಾಂತಕುಮಾರ್ ಪತ್ರ ಬಿಜೆಪಿಗೆ ಬಿಸಿ ತುಪ್ಪವಾಗಿದೆ. 
 

ವೆಬ್ದುನಿಯಾವನ್ನು ಓದಿ