ದೇಶದಲ್ಲಿ ಅಲ್ಪಪ್ರಮಾಣದಲ್ಲಿ ಅಸಹಿಷ್ಣುತೆಯಿದೆ: ಒಪ್ಪಿಕೊಂಡ ಸಚಿವ ವೆಂಕಯ್ಯನಾಯ್ಡು

ಸೋಮವಾರ, 30 ನವೆಂಬರ್ 2015 (16:16 IST)
ಯಾವುದೇ ಪ್ರತ್ಯೇಕ ಘಟನೆಯ ಬಗ್ಗೆ ಪ್ರಸ್ತಾಪಿಸದ ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಂ.ವೆಂಕಯ್ಯನಾಯ್ಡು, ದೇಶದಲ್ಲಿ ಅಲ್ಪಮಟ್ಟಿನ ಅಸಹಿಷ್ಣುತೆ ಇದೆ ಎಂದು ಮೊದಲ ಬಾರಿಗೆ ಒಪ್ಪಿಕೊಂಡಿದ್ದಾರೆ.
 
ಅಸಹಿಷ್ಣುತೆ ಕುರಿತಂತೆ ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡ ನಾಯ್ಡು, ಸಮಾಜದಲ್ಲಿ ಸ್ವಲ್ಪ ಮಟ್ಟಿನ ಅಸಹಿಷ್ಣುತೆ ಎದುರಾಗಿದ್ದು ಅದನ್ನು ಗುರುತಿಸಿ ಸದೆಬಡೆಯಲಾಗುವುದು ಎಂದು ಭರವಸೆ ನೀಡಿದ್ದಾರೆ.
 
ದೇಶದಲ್ಲಿ ಕೆಲವರು ಅಸಹಿಷ್ಣುತೆ ಕುರಿತಂತೆ ಮನಬಂದಂತೆ ತಮಾಷೆ ರೀತಿಯಲ್ಲಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಇಂತಹ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸುವುದು ಅನಿವಾರ್ಯವಾಗಿದೆ ಎಂದರು. 
 
ದೇಶದ ಕೆಲ ಭಾಗಗಳಲ್ಲಿ ದಲಿತರು ಮತ್ತು ಸಾಹಿತಿಗಳ ಹತ್ಯೆ ಘಟನೆಗಳನ್ನು ಪ್ರಸ್ತಾಪಿಸಿದ ನಾಯ್ಡು, ಕೆಲವು ಕಡೆ ಅಸಹಿಷ್ಣುತೆ ಎದುರಾಗಿದ್ದು, ಅಂತಹ ಘಟನೆಗಳನ್ನು ನಿರ್ಧಾಕ್ಷಿಣ್ಯವಾಗಿ ನಿಯಂತ್ರಿಸಲಾಗುವುದು ಎಂದು ಗುಡುಗಿದರು.
 
ನರೇಂದ್ರ ಮೋದಿ ಪ್ರಧಾನಿಯಾದ ಕೂಡಲೇ ಇಂತಹ ಘಟನೆಗಳು ನಡೆಯುತ್ತಿಲ್ಲ. ಮೊದಲಿನಿಂದಲೂ ಇಂತಹ ಘಟನೆಗಳು ನಡೆಯುತ್ತಿವೆ. ಘಟನೆಗಳ ಬಗ್ಗೆ ಕೆಲವರು ತೀವ್ರವಾದ ಹೇಳಿಕೆ ನೀಡುತ್ತಿದ್ದಾರೆ. ಇಂತಹ ಹೇಳಿಕೆಗಳನ್ನು ನಾವು ಖಂಡಿಸಲೇಬೇಕಾಗಿದೆ ಎಂದು ಕಿಡಿಕಾರಿದರು.
 
ಖ್ಯಾತ ಸಾಹಿತಿ ಸಲ್ಮಾನ್ ರಷ್ದಿಯವರ ವಿವಾದಾತ್ಮಕ ಪುಸ್ತಕ ದಿ ಸಟಾನಿಕ್ ವರ್ಸೆಸ್‌ಗೆ ನಿಷೇಧ ಹೇರುವುದು ತಪ್ಪು ಎನ್ನುವ ಮಾಜಿ ಗೃಹ ಸಚಿವ ಪಿ.ಚಿದಂಬರಂ ಹೇಳಿಕೆಯನ್ನು ಸ್ವಾಗತಿಸುವುದಾಗಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯನಾಯ್ಡು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ