ಅರುಣಾಚಲ ಪ್ರದೇಶದಲ್ಲಿ ಯುದ್ಧದಂತಹ ವಾತಾವರಣವಿಲ್ಲ: ಮಾಜಿ ಸಿಎಂ ನಬಾಮ್ ಟುಕಿ

ಶನಿವಾರ, 30 ಜನವರಿ 2016 (18:22 IST)
ಅರುಣಾಚಲ ಪ್ರದೇಶದಲ್ಲಿ ಯುದ್ಧದಂತಹ ವಾತಾವರಣವಿಲ್ಲವೆಂದು ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ನಬಾಮ್ ಟುಕಿ, ರಾಜ್ಯದಲ್ಲಿ ಕೇಂದ್ರ ಸರಕಾರ ರಾಷ್ಟ್ರಪತಿ ಅಡಳಿತ ಹೇರುವಂತಹ ಶಿಫಾರಸ್ಸು ಮಾಡುವ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
 
ಶತ್ರುಘ್ನ ಸಿನ್ಹಾ ಹೇಳಿಕೆಯನ್ನು ಗಮನಿಸಿದಲ್ಲಿ ರಾಜ್ಯದ ಜನತೆಯ ಯಾವ ರೀತಿಯ ನೋವನುಭವಿಸುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಅರುಣಾಚಲ ಪ್ರದೇಶದೊಂದಿಗೆ ಅನ್ಯಾಯವಾಗಿದೆ ಎನ್ನುವುದು ಸಂಪೂರ್ಣ ಭಾರತ ದೇಶಕ್ಕೆ ಗೊತ್ತಾಗಿದೆ, ಆದ್ದರಿಂದ, ಸುಪ್ರೀಂಕೋರ್ಟ್‌ನಿಂದ ನ್ಯಾಯ ದೊರೆಯುವ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದ್ದಾರೆ
 
ಅರುಣಾಚಲ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಅರಾಜಕತೆ ತಾಂಡವವಾಡುತ್ತಿದೆ ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿರುವುದು ಹೇಯ ಕೃತ್ಯ ಎಂದು ಕಿಡಿಕಾರಿದ ಅವರು, ರಾಜ್ಯ ಸರಕಾರವನ್ನು ಸಂಪರ್ಕಿಸದೆ ವರದಿ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಕೇವಲ ಒಬ್ಬ ವ್ಯಕ್ತಿಯಿಂದ ವರದಿ ಸಿದ್ದಪಡಿಸಲಾಗಿದೆ. ರಾಜ್ಯದಲ್ಲಿ ಅಂತಹ ಯಾವುದೇ ವಾತಾವರಣವಿಲ್ಲ. ಮುಂದಿನ ದಿನಗಳಲ್ಲಿಯೂ ಅಂತಹ ವಾತಾವರಣ ಬರಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ನಬಾಮ್ ಟುಕಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ