ಹರಿಯಾಣಾ: ಕೇವಲ 3 ಮತಗಳ ಅಂತರದಿಂದ ಸೋತ ಐಎನ್‌ಎಲ್‌ಡಿ ನಾಯಕ

ಸೋಮವಾರ, 20 ಅಕ್ಟೋಬರ್ 2014 (11:25 IST)
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಸೋಲು ಗೆಲುವಿನ ಜೋಕಾಲಿಯಾಟ ಇಲ್ಲಿ ಸಾಮಾನ್ಯವಾದದ್ದು. ಈ ಬಾರಿ ಪ್ರಚಂಡ ಬಹುಮತದಿಂದ ಗೆಲ್ಲಿಸಿದ್ದ ಅಭ್ಯರ್ಥಿ, ಪಕ್ಷವನ್ನು ಮುಂದಿನ ಬಾರಿ  ಮತದಾರ ಮಖಾಡೆ ಮಲಗಿಸಬಹುದು. ಗೆದ್ದಾಗ ಸಂಭ್ರಮಾಚರಣೆ ಸಹಜ. ಸೋಲನ್ನು ಸ್ವಲ್ಪ ದಿನಗಳ ನಂತರ ಮರೆಯುವುದು ಸಹಜ. ಆದರೆ ಸೋಲು ಕೇವಲ 3 ಮತಗಳ ಅಂತರದಿಂದಾದರೇ....? ಗೆಲುವು ಯಾರದೆನ್ನುವುದು? ಸೋತವನಿಗೆ ಉಂಟಾಗುವ ನಿರಾಶೆ ಎಷ್ಟು ಮಟ್ಟದ್ದಾಗಿರಬಹುದು?

ಹರಿಯಾಣಾದ ರಾಯ್ ವಿಧಾನಸಭೆ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಐಎನ್‌ಎಲ್‌ಡಿ ಅಭ್ಯರ್ಥಿ ಇಂದ್ರಜಿತ್ ದಹಿಯಾ ಅವರಿಗಾದದ್ದು ಅದೇ. ಅವರ ಸೋಲಿನ ಅಂತರ ಕೇವಲ ಮೂರು ಮತಗಳು.  
 
ಹಾಲಿ ಕಾಂಗ್ರೆಸ್ ಶಾಸಕ ಜೈ ತೀರತ್ ಅವರಿಂದ ದಹಿಯಾ ಸೋಲಿಸಲ್ಪಟ್ಟಿದ್ದಾರೆ. ತೀರತ್ 36.703 ಮತಗಳನ್ನು ಪಡೆದರೆ, ದಹಿಯಾ 36.700 ಮತಗಳಿಂದ ಸೋತು ಆಘಾತವನ್ನು ಅನುಭವಿಸಿದ್ದಾರೆ.
 
ಬಿಜೆಪಿ, ಕಾಂಗ್ರೆಸ್ ಮತ್ತು ಐಎನ್‌ಎಲ್‌ಡಿ ನಡುವೆ ತೀವೃ ಹಣಾಹಣಿ ನಡೆದ ಈ ಕ್ಷೇತ್ರ, ಮತಎಣಿಕೆಯ ಕೊನೆಯವರೆಗೂ ಕುತೂಹಲವನ್ನು ಕಾದಿಟ್ಟುಕೊಂಡಿತ್ತು. ಏರಿಳಿತಗಳ ಹಾವು ಏಣಿಯಾಟದಲಿ ಕೊನೆಗೂ ಕಾಂಗ್ರೆಸ್ ಅಭ್ಯರ್ಥಿ ಕೇವಲ 3 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು. ಮೂರನೇ ಸ್ಥಾನಕ್ಕೆ ಜಾರಿದ ಬಿಜೆಪಿ ಅಭ್ಯರ್ಥಿ ಕೂಡ  ಹೆಚ್ಚಿನ ಮತಗಳ ಅಂತರವನ್ನೇನು ಹೊಂದಿಲ್ಲ. ಅವರು ಪಡೆದ ಮತ 34, 523. ಅವರ ಸೋಲಿನ ಅಂತರ ಕೇವಲ 2180 ಮತಗಳಷ್ಟೇ. 
 
2009ರಲ್ಲಿ ಹರಿಯಾಣಾದಲ್ಲಿ ಕೇವಲ 4 ಸ್ಥಾನಗಳಿಗೆ ತೃಪ್ತಿ ಪಡೆದುಕೊಂಡಿದ್ದ ಬಿಜೆಪಿ ಈ ಬಾರಿ 47 ಸ್ಥಾನಗಳನ್ನು ಗಳಿಸಿ ಸ್ಪಷ್ಪ ಬಹುಮತದೊಂದಿಗೆ ಅಧಿಕಾರದ ಗಾದಿ ಹಿಡಿಯುತ್ತಿದೆ. 

ವೆಬ್ದುನಿಯಾವನ್ನು ಓದಿ