25 ಸಂಸದರ ಅಮಾನತ್ತು ಭಾರತ,ಪ್ರಜಾಪ್ರಭುತ್ವಕ್ಕೆ ಇಂದು ಕರಾಳ ದಿನ: ಸೋನಿಯಾ ಆಕ್ರೋಶ

ಸೋಮವಾರ, 3 ಆಗಸ್ಟ್ 2015 (17:53 IST)
ಲೋಕಸಭೆಯ ಸಭಾಪತಿ ಸುಮಿತ್ರಾ ಮಹಾಜನ್ 25 ಸಂಸದರನ್ನು ಅಮಾನತ್ತುಗೊಳಿಸಿರುವುದನ್ನು ವಿರೋಧಿಸಿದ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ, 25 ಸಂಸದರನ್ನು ಅಮಾನತ್ತುಗೊಳಿಸಿರುವುದು ಭಾರತ ಮತ್ತು ಪ್ರಜಾಪ್ರಭುತ್ವಕ್ಕೆ ಇಂದು ಕರಾಳ ದಿನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
25 ಸಂಸದರನ್ನು ಐದು ದಿಗಳ ಕಾಲ ಅಮಾನತ್ತುಗೊಳಿಸಿರುವುದು ಕೇಂದ್ರ ಸರಕಾರದ ಉದ್ದೇಶಪೂರ್ವಕ ಕೃತ್ಯವಾಗಿದೆ ಎಂದು ಕಾಂಗ್ರೆಸ್ ಗುಡುಗಿದೆ.
 
ಲಲಿತ್‌ಗೇಟ್ ಮತ್ತು ವ್ಯಾಪಂ ಹಗರಣದಲ್ಲಿ ಸಿಲುಕಿದ ಕೇಂದ್ರ ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಮಧ್ಯಪ್ರದೇಶ ಮತ್ತು ರಾಜಸ್ಥಾನ ಮುಖ್ಯಮಂತ್ರಿಗಳಾದ ಶಿವರಾಜ್ ಸಿಂಗ್ ಚೌಹಾನ್ ಮತ್ತು ವಸುಂಧರಾ ರಾಜೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಸದನದಲ್ಲಿ ಭಿತ್ತಿಪತ್ರಗಳೊಂದಿಗೆ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದ ಸಂಸದರನ್ನು ಅಮಾನತ್ತುಗೊಳಿಸಲಾಗಿದೆ. 
 
ಸಂಸದರು ಉದ್ದೇಶಪೂರ್ವಕವಾಗಿ ಸದವನದಲ್ಲಿ ಗದ್ದಲವೆಬ್ಬಿಸುತ್ತಿರುವ ಹಿನ್ನೆಲೆಯಲ್ಲಿ 374(ಎ) ಕಾನೂನಿನಡಿ ಅವರನ್ನು ಅಮಾನತ್ತುಗೊಳಿಸಲಾಗುತ್ತಿದೆ ಎಂದು ಲೋಕಸಭೆಯ ಸಭಾಪತಿ ಸುಮಿತ್ರಾ ಮಹಾಜನ್ ಘೋಷಿಸಿದರು.
 
ಕೇಂದ್ರ ಸರಕಾರ ಸಭಾಪತಿಯವನ್ನು ಸಂಪರ್ಕಿಸಿ ಕಳೆದ ಹಲವು ದಿನಗಳಿಂದ ಕಲಾಪಕ್ಕೆ ವಿಪಕ್ಷಗಳು ಅಡ್ಡಿಪಡಿಸುತ್ತಿವೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ 44 ಸಂಸದರಲ್ಲಿ 25 ಸಸಂದರನ್ನು ಅಮಾನತ್ತುಗೊಳಿಸಿ ಸಭಾಪತಿ ಆದೇಶ ಹೊರಡಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ