ಆಕೆಯೊಂದಿಗಿನ ಕೊನೆಯ ಸೆಲ್ಫಿ; ಹೃದಯ ಕಲಕುವ ದುರಂತ ಪ್ರೇಮ ಕಥೆ

ಶುಕ್ರವಾರ, 20 ಜನವರಿ 2017 (14:53 IST)
ಇದು ಪ್ರಾಣಕ್ಕೆ ಪ್ರಾಣವಾದ ಪತ್ನಿಯನ್ನು ಕಳೆದುಕೊಂಡ ಪತಿಯ ಸಹಿಸಲಾಗದ ನೋವು. ಒಂದು ಸಣ್ಣ ಅಜಾಗರೂಕತೆ ಎರಡು ಪ್ರಾಣವನ್ನು ಬಲಿ ಪಡೆದರೆ, ಇನ್ನೊಂದು ಪ್ರಾಣವನ್ನು ಜೀವಂತ ಶವವನ್ನಾಗಿರಿಸಿರುವ ಕಥೆ.

ಹೃದಯ ಹಿಂಡುವ ಈ ಕಥೆಯ ದುರಂತ ನಾಯಕ- ನಾಯಕಿಯ ಹೆಸರು ಕಾರ್ತಿಕ್ ಕೆ.ವಿ. ಮತ್ತು ಉಮಾಮಹೇಶ್ವರಿ. ಬೈಕ್ ಅಪಘಾತವೊಂದರಲ್ಲಿ ಪತ್ನಿಯನ್ನು ಕಳೆದುಕೊಂಡಿರುವ ಕಾರ್ತಿಕ್ ತಾವಿಬ್ಬರು ಕೊನೆಯದಾಗಿ ತೆಗೆದುಕೊಂಡ ಸೆಲ್ಫಿಯನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡು ಕಣ್ಣಾಲೆಗಳನ್ನು ಹಸಿಯಾಗಿಸುವ ಕಥೆಯನ್ನು ಬಿಚ್ಚಿಟ್ಟಿದ್ದಾನೆ. ಪ್ರೀತಿಯ ಪತ್ನಿ ಜತೆಗಿಲ್ಲವೆಂಬ ಸಹಿಸಲಾಗದ ನೋವಿನಲ್ಲೂ ಈ ಚೆನ್ನೈ ನಿವಾಸಿ ಸುರಕ್ಷಿತ ಚಾಲನಾ ನಿಯಮಗಳನ್ನು ನಿರ್ಲಕ್ಷಿಸುವವರಿಗೆ ಒಂದು ಸಂದೇಶವನ್ನು ನೀಡಿದ್ದಾನೆ. ಅವನದೇ ಮಾತುಗಳಲ್ಲಿ ಅವನ ಕಣ್ಣೀರ ಕಥೆ...
 
“ಇದು ನನ್ನ ಪ್ರೀತಿಯ ಪತ್ನಿಯೊಂದಿಗೆ ನಾನು ಕ್ಕಿಕ್ಕಿಸಿಕೊಂಡ ಕೊನೆಯ ಸೆಲ್ಫಿ.  ಸಾಕಷ್ಟು ಕನಸು ಮತ್ತು ನಿರೀಕ್ಷೆಗಳೊಂದಿಗೆ ಪರಿವಾರದೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಿದ್ದೆ. ಆದರೆ ದೇವರ ಯೋದನೆ ಬೇರೆಯಾಗಿತ್ತು. ಜನವರಿ 7 ರ ಮುಂಜಾನೆ ಪತ್ನಿ ಉಮಾ ಜತೆ ನಾನು ಬೈಕ್‌ನಲ್ಲಿ ಹೋಗುತ್ತಿದ್ದೆ. 6.40ರ ಸುಮಾರಿಗೆ ಅಣ್ಣಾ ನಗರದ ಬಳಿ ಬೈಕ್ ಹೋಗುತ್ತಿದ್ದಾಗ ಹಿಂಬದಿ ಕುಳಿತಿದ್ದ ಉಮಾ ಕೆಳಕ್ಕೆ ಬಿದ್ದಳು. ತಕ್ಷಣ ಆಕೆಯನ್ನು ಸುಂದರಮ್ ಆಸ್ಪತ್ರೆಗೆ ದಾಖಲಿಸಿದೆ. ತಲೆ ಸ್ಕ್ಯಾನ್ ಮಾಡಿದ ವೈದ್ಯರು ಮೆದುಳಿನ ಎಡಭಾಗಕ್ಕೆ ಪೆಟ್ಟಾಗಿದೆ, ಬದುಕುವುದು ಕಷ್ಟ, ಅಪೋಲೋ ಆಸ್ಪತ್ರೆಗೆ ಕರೆದೊಯ್ದು ಪ್ರಯತ್ನಿಸಿ ಎಂದರು. ಅಲ್ಲಿನ ವೈದ್ಯರು ನೀಡಿದ್ದು ಋಣಾತ್ಮಕ ಫೀಡ್‌ಬ್ಯಾಕ್". 
 
“ ಉಮಾಗೆ ಕೃತಕ ಉಸಿರಾಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಆಗ ಆಕೆ 4 ತಿಂಗಳು 23 ದಿನಗಳ ಗರ್ಭಿಣಿ. ಅಪಘಾತವಾಗಿ ಅದಾಗಲೇ 5 ದಿನಗಳು ಉರುಳಿದ್ದವು. ತಾಯಿ ಮತ್ತು ಮಗು ಜೀವನ್ಮರಣದ ಹೋರಾಟ ನಡೆಸಿದ್ದರು. ಜನವರಿ 12 ರಂದು ಗರ್ಭದಲ್ಲಿದ್ದ ಮಗು ಕೊನೆಯುಸಿರೆಳೆಯಿತು. ತಾಯಿಗೆ ನಂಜಾಗಬಹುದೆಂದು ಸತ್ತ ಭ್ರೂಣವನ್ನು ವೈದ್ಯರು ಹೊರಕ್ಕೆ ತೆಗೆದರು. 4 ತಿಂಗಳು 28 ದಿನಗಳ ಮಗುವನ್ನು ನೋಡಿ ನನಗೆ ಮತ್ತು ಉಮಾ ಸಹೋದರನಿಗೆ ಹೃದಯ ಒಡೆದಂತಾಯಿತು". 
 
"ಉಮಾ ಬದುಕಲಾರಳು ಎಂಬುದು ಖಚಿತವಾಗಿದ್ದರಿಂದ ವೈದ್ಯರು ಅಂಗದಾನದ ಬಗ್ಗೆ ಸಲಹೆ ನೀಡಿದರು.ಆಕೆ 7 ರಿಂದ 8 ಜನರಿಗೆ ಬದುಕು ನೀಡಬಲ್ಲಳು ಎಂದು ವೈದ್ಯರು ಹೇಳಿದರು. ನಾನು ಮತ್ತು ಉಮಾ ಈ ಬಗ್ಗೆ ಹಲವು ಬಾರಿ ಮಾತನಾಡಿಕೊಂಡಿದ್ದೆವಾದ್ದರಿಂದ ದುಃಖದ ಮಡುವಿನಲ್ಲಿಯೂ ನಾನು ಅದಕ್ಕೆ ಸಮ್ಮತಿ ನೀಡಿದೆ". 
 
"ಜನವರಿ 13ರಂದು ಮುಂಜಾನೆ 9:35 ಕ್ಕೆ ಹೃದಯ ಸ್ತಂಭನವಾಗಿ ಆಕೆ ನನ್ನನ್ನು ಅಗಲಿದಳು. ವೈದ್ಯರ ಬಾಯಿಂದ ಈ ಮಾತುಗಳನ್ನು ಕೇಳಿದಾಗ ನನ್ನ ಬದುಕು ಮತ್ತು ಆತ್ಮವನ್ನು ಕಳೆದುಕೊಂಡಂತೆ ಭಾಸವಾಯಿತು". 
 
"ಆ ದಿನವೇ ಆಕೆಯ ಅಂತಿಮ ಸಂಸ್ಕಾರ ಮಾಡುವುದೆಂದು ನಿರ್ಧರಿಸಲಾಯಿತು. ಅದು ಆಕೆಯೊಂದಿಗಿನ ಕೊನೆಯ ಪಯಣವಾಗಿತ್ತು. ಸಂಜೆ 5 ರಿಂದ 5.30ರೊಳಗೆ ಆಕೆಯ ಪಂಚಭೂತಗಳಲ್ಲಿ ಲೀನಳಾದಳು". 
 
"ನಾನು ನಾನಾಗಿರಲಿಲ್ಲ. ದೇವರಲ್ಲಿ ನೀನೇಕೆ ನನ್ನ ವಿಷಯದಲ್ಲಿ ಇಷ್ಟೊಂದು ಕ್ರೂರಿ ಎಂದು ಕೇಳಿದೆ. 23 ಆಗಸ್ಟ್ 2007ರಿಂದ ಆಕೆಯನ್ನು ಪ್ರೀತಿಸಿದ್ದ ನಾನು 21 ಆಗಸ್ಟ್ 2016ರಲ್ಲಿ ಆಕೆಯನ್ನು ಮದುವೆಯಾಗಿದ್ದೆ. ಜತೆಯಾಗಿ ನಡೆಯಲು ಆರಂಭಿಸಿ 5 ತಿಂಗಳು ಸಹ ಕಳೆದಿರಲಿಲ್ಲ. ಅಷ್ಟರಲ್ಲಿ ಆಕೆಯ ಬದುಕು (ಜನವರಿ 13, 2017) ಕೊನೆಯಾಯ್ತು. ಆಕೆ ಗರ್ಭಿಣಿ ಕೂಡ ಆಗಿದ್ದಳು. ಇನ್ನುಳಿದ ಬದುಕನ್ನು ನಾನು ಹೇಗೆ ನಡೆಸುತ್ತೇನೆ ಎಂಬುದನ್ನು ಯೋಚಿಸದೇ ದೇವರೇ ನೀನಾಕೆಯನ್ನು ಕರೆದೊಯ್ದೆ. ನನ್ನಲ್ಲಿರುವ ಪ್ರಶ್ನೆಗಳಿಗೆ ಉತ್ತರವಿಲ್ಲ. ಎಲ್ಲಿಗೆ ಹೋಗಿ ನಾನಿದಕ್ಕೆ ಪರಿಹಾರವನ್ನು ಕಂಡುಕೊಳ್ಳಲಿ?",
 
"ನಾನಿದನ್ನು ಪೋಸ್ಟ್ ಮಾಡಲು ಕಾರಣ:
 
1. ವಾಹನ ಚಲಾಯಿಸುವಾಗ ಸುರಕ್ಷತಾ ನಿಯಮಗಳನ್ನು ಪಾಲಿಸಿ. ನಾನು ಹೆಲ್ಮೆಟ್ ಧರಿಸಿದ್ದೆ. ಆದರೆ ನನ್ನ ಪತ್ನಿಗೆ ಹೆಲ್ಮೆಟ್ ಖರೀದಿಸಿರಲಿಲ್ಲ. ಮುಂದೇನಾಗುತ್ತದೆ ಎಂಬುದು ನಿಮಗೆ ತಿಳಿದಿರುವುದಿಲ್ಲ. ಸದಾ ಸುರಕ್ಷತೆಗೆ ಆದ್ಯತೆ ನೀಡಿ.
 
2. ದೇವರು ನಿನ್ನ ಬದುಕನ್ನು ತೆಗೆದುಕೊಳ್ಳಬೇಕಂದಿದ್ದರೆ ನಿನ್ನ ಹಣ, ಅಧಿಕಾರವನ್ನು ಕಿತ್ತುಕೊಳ್ಳುವುದಿಲ್ಲ. ನಿಮ್ಮ ಪ್ರಾರ್ಥನೆಗಳು ಸಹಾಯಕ್ಕೆ ಬರುವುದಿಲ್ಲ. ಆತ ತನ್ನ ನಿರ್ಧಾರದ ಬಗ್ಗೆ ಕೆಲವೊಮ್ಮೆ ಬಹಳಷ್ಟು ಕ್ರೂರಿಯಾಗಿರುತ್ತಾನೆ. ಪರಿವಾರದವರು, ಸ್ನೇಹಿತರು, ಸ್ನೇಹಿತರ ಸ್ನೇಹಿತರು, ವೈದ್ಯರು, ನರ್ಸ್, ಅವರ ಕುಟುಂಬ- ಹೀಗೆ ಸಾವಿರಕ್ಕಿಂತಲೂ ಹೆಚ್ಚು ಜನರು ನನ್ನ ಉಮಾ ಜೀವ ಉಳಿಯಲೆಂದು ಪ್ರಾರ್ಥಿಸಿದ್ದರು. ಆದರೆ ಪ್ರಯೋಜನವಾಗಲಿಲ್ಲ. ಆಕೆ ಹೋಗಿಯೇ ಬಿಟ್ಟಳು". 
 
"ನೀವು ಪ್ರೀತಿಸುವವರೊಂದಿಗೆ ಈ ಪೋಸ್ಟ್‌ನ್ನು ಹಂಚಿಕೊಳ್ಳಿ. ಏಕೆಂದರೆ ಯಾರಿಗು ಕೂಡ ನನಗೆದುರಾದ ಕೆಟ್ಟ ಪರಿಸ್ಥಿತಿ ಎದುರಾಗಬಾರದು. ಆಕೆಯ ಆತ್ಮಕ್ಕೆ ಶಾಂತಿ ಸಿಗಲೆಂದು ಎಲ್ಲರೂ ಪ್ರಾರ್ಥಿಸಿ".
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ