ಕನಸುಗಾರ ಕಲಾಂ ಕೊನೆಯ ಟ್ವೀಟ್

ಮಂಗಳವಾರ, 28 ಜುಲೈ 2015 (13:03 IST)
ಕ್ಷಿಪಣಿ ಮನುಷ್ಯ ಕಲಾಂ ಇಂದು ನಮ್ಮೊಂದಿಗೆ ಇಲ್ಲ. ಆದರೆ ಅವರ ಬಿತ್ತಿದ ಕನಸುಗಳೇ ಸಾಕು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು. ಅವರು ಬಿಟ್ಟು ಹೋಗಿರುವ ಆದರ್ಶಗಳು ಮಾತ್ರ ಸದಾ ಕಾಲ ಅಜರಾಮರವಾಗಿರುತ್ತವೆ. 
 
ನಿನ್ನೆ ಶಿಲ್ಲಾಂಗ್‌ನಲ್ಲಿ ಉಪನ್ಯಾಸ ನೀಡುತ್ತಿದ್ದ ವೇಳೆ ಕುಸಿದು ಬಿದ್ದಿದ್ದ ಕಲಾಂ ಅವರನ್ನು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಉಳಿಸಿಕೊಳ್ಳುವ ಪ್ರಯತ್ನ ನಡೆಸಲಾಯಿತು. ಆದರೆ ಅದು ಪ್ರಯೋಜನವಾಗಲಿಲ್ಲ. ಅವರು ಹೃದಯಾಘಾತಕ್ಕೆ ತುತ್ತಾಗಿರುವ ಸಾಧ್ಯತೆಯಿದೆ ಎಂದು ಬೆಥನಿ ಆಸ್ಪತ್ರೆ ನಿರ್ದೇಶಕ ಜಾನ್ ಸೈಲೋ ರೈಂಟಾತಿಯಾಗ್ ತಿಳಿಸಿದ್ದರು.
 
ಜನಸಾಮಾನ್ಯರ ರಾಷ್ಟ್ರಪತಿ ಎಂದು ಹೆಸರುಗಳಿಸಿದ್ದ ಕಲಾಂ ಸದಾ ಪ್ರವಾಸ ಮಾಡುತ್ತ ಭಾರತದ ಭವಿಷ್ಯವಾದ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದರಲ್ಲಿ ತತ್ಪರರಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸಹ ಸಕ್ರಿಯರಾಗಿದ್ದ ಅವರು ಟ್ವಿಟ್ಟರ್ ನಲ್ಲಿ 1.4 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದರು. ಅವರು ಮಾಡಿರುವ ಕೊನೆಯ ಟ್ವೀಟ್ ಈ ಮುಂದಿನಂತಿದೆ. 
 
"ವಾಸ ಯೋಗ್ಯ ಗ್ರಹಗಳ ಕುರಿತು ಉಪನ್ಯಾಸ ನೀಡಲು ಶಿಲ್ಲಾಂಗ್‌ನಲ್ಲಿರುವ ಐಐಎಂಗೆ ತೆರಳುತ್ತಿದ್ದೇನೆ. ಜನಪಾಲ್‌ ಸಿಂಗ್‌ ಮತ್ತು ಶರ್ಮಾ ಸಹ ಆ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ" (ಗೋಯಿಂಗ್‌ ಟು ಶಿಲ್ಲಾಂಗ್‌.... ಟು ಟೆಕ್‌ ಕೋರ್ಸ್‌ ಆನ್‌ ಲೈವಬಲ್‌ ಪ್ಲಾನೆಟ್‌ ಅರ್ಥ್ ಅಟ್‌ ಐಐಎಂ. ವಿದ್ ಶ್ರೀಜನಪಾಲ್‌ಸಿಂಗ್‌ ಅಂಡ್‌ ಶರ್ಮಾ)'..... ಎಂದು ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಲ್ಲಿರುವ ಐಐಎಂಗೆ ಉಪನ್ಯಾಸ ನೀಡಲು ತೆರಳುವ ಮುನ್ನ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ ಟ್ವೀಟ್‌ ಮಾಡಿದ್ದರು.
 
ಅವರು ಮಾಡಿರುವ ಇದಕ್ಕೂ ಮೊದಲಿನ ಟ್ವೀಟ್‌ ಕಾರ್ಗಿಲ್ ವಿಜಯ್ ದಿವಸ್ ಕುರಿತಾಗಿದೆ.  ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಸ್ ನಿಮಿತ್ತ ಹುತಾತ್ಮ ಯೋಧರಿಗೆ ಅವರು ಶ್ರದ್ಧಾಂಜಲಿಯನ್ನು ಅರ್ಪಿಸಿದ್ದರು. 

ವೆಬ್ದುನಿಯಾವನ್ನು ಓದಿ