ನನ್ನ ವಿರುದ್ಧ ಆರೋಪ ಮಾಡಿದ್ರೆ ಬೂಟಿನಿಂದ ಹೊಡೆಯುತ್ತೇನೆ: ಕೇಂದ್ರ ಸಚಿವ ಕಿರೆನ್ ರಿಜಿಜು

ಮಂಗಳವಾರ, 13 ಡಿಸೆಂಬರ್ 2016 (15:01 IST)
ನಾರ್ಥ್ ಈಸ್ಟರನ್ ಎಲೆಕ್ಟ್ರಿಕ್ ಪವರ್ ಸಂಸ್ಥೆಯ ಭ್ರಷ್ಟಾಚಾರದ ಸತ್ಯಶೋಧನಾ ವರದಿಯಲ್ಲಿ ಇತರರೊಂದಿಗೆ ತಮ್ಮ ಹೆಸರು ಪ್ರಸ್ತಾಪವಾಗಿದೆ ಎನ್ನುವ ಆರೋಪಗಳಲ್ಲಿ ಸತ್ಯಾಂಶವಿಲ್ಲ. ಇಂತಹ ವರದಿಗಳನ್ನು ಹರಡುವವರಿಗೆ ಬೂಟಿನಿಂದ ಹೊಡೆಯುತ್ತೇವೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರೆನ್ ರಿಜಿಜು ಗುಡುಗಿದ್ದಾರೆ.
 
ನನ್ನ ವಿರುದ್ಧ ಆರೋಪ ಮಾಡುವವರು ಅರುಣಾಚಲ ಪ್ರದೇಶಕ್ಕೆ ಬಂದಲ್ಲಿ ಅವರು ಬೂಟಿನ ಏಟು ತಿನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
 
ಮಾಧ್ಯಮಗಳಲ್ಲಿ ಬಂದ ವರದಿಗಳ ಪ್ರಕಾರ, ಸರಕಾರಿ ಸ್ವಾಮ್ಯದ ನಾರ್ಥ್ ಈಸ್ಟರನ್ ಎಲೆಕ್ಟ್ರಿಕ್ ಪವರ್ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ, ಕೇಂದ್ರ ಸಚಿವ ರಿಜಿಜು ಮತ್ತು ಅವರ ಗುತ್ತಿಗೆದಾರ ಸಹೋದರ ಗೊಬೈ ರಿಜಿಜು ಸೇರಿದಂತೆ ಅನೇಕ ಗಣ್ಯ ವ್ಯಕ್ತಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಜಾಗೃತ ದಳದ ಮುಖ್ಯ ಅಧಿಕಾರಿ ತಮ್ಮ ವರದಿಯಲ್ಲಿ ಬಹಿರಂಗಪಡಿಸಿದ್ದಾರೆ.
 
 ನಾರ್ಥ್ ಈಸ್ಟರನ್ ಎಲೆಕ್ಟ್ರಿಕ್ ಪವರ್ ಸಂಸ್ಥೆ ಎರಡು ಬೃಹತ್ ಹೈಡ್ರೋ-ಎಲೆಕ್ಟ್ರಿಕ್ ಪ್ರೊಜೆಕ್ಟ್‌ ಡ್ಯಾಮ್‌ಗಳನ್ನು ನಿರ್ಮಿಸುತ್ತಿದ್ದು, ಡ್ಯಾಮ್ ನಿರ್ಮಾಣದಲ್ಲಿ ಭಾರಿ ಅವ್ಯವಹಾರವಾಗಿರುವುದು ಬಹಿರಂಗವಾಗಿದೆ.
 
ಕೇಂದ್ರ ಸಚಿವ ರಿಜಿಜು,  ವಿದ್ಯುತ್ ಸಚಿವಾಲಯಕ್ಕೆ ಪತ್ರವೊಂದನ್ನು ಬರೆದು, ಗುತ್ತಿಗೆದಾರರಾಗಿರುವ ಸಹೋದರ ಗೊಬೈ ರಿಜಿಜುಗೆ ಹಣ ಬಿಡುಗಡೆ ಮಾಡುವಂತೆ ಕೋರಿದ್ದಾರೆ. ಇದೀಗ ಅವರ ಬರೆದ ಪತ್ರ ವಿವಾದಕ್ಕೆ ಕಾರಣವಾಗಿದೆ.
 
ಸಹೋದರನಿಗೆ ಹಣ ಬಿಡುಗಡೆ ಮಾಡುವಂತೆ ವಿದ್ಯುತ್ ಸಚಿವಾಲಯಕ್ಕೆ ಪತ್ರ ಬರೆದಿರುವುದು ನಿಜ. ಹಾಗಂತ ಭ್ರಷ್ಟಾಚಾರಕ್ಕೆ ನೆರವು ನೀಡಿದ್ದೇನೆ ಎಂದು ಅರ್ಥವೇ? ಎಂದು ತಿರುಗೇಟು ನೀಡಿದ್ದಾರೆ.
 
ಗುಜರಾತ್‌‍ನ ಐಪಿಎಸ್ ಅಧಿಕಾರಿಯಾದ ಸತೀಶ್ ಶರ್ಮಾ ಜಾಗೃತದಳದ ಮುಖ್ಯಸ್ಥರಾಗಿದ್ದಾರೆ. ಸತ್ಯಶೋಧನಾ ವರದಿಯಲ್ಲಿ ನಾರ್ಥ್ ಈಸ್ಟರನ್ ಎಲೆಕ್ಟ್ರಿಕ್ ಪವರ್ ಸಂಸ್ಥೆ ಭ್ರಷ್ಟಾಚಾರ ಹೊರಗೆಡುವಿದ ಹಿನ್ನೆಲೆಯಲ್ಲಿ ಅವರನ್ನು ತ್ರಿಪುರಾದ ಸಿಆರ್‌ಪಿಎಫ್‌‌ಗೆ ವರ್ಗಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ