ಸಂವಿಧಾನ,ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಲ್ಲಂಘಿಸಿದವರಿಗೆ ಸೋಲು ಖಚಿತ: ಮೋದಿಗೆ ಸೋನಿಯಾ ಟಾಂಗ್

ಗುರುವಾರ, 14 ಜುಲೈ 2016 (13:10 IST)
ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಅಡಳಿತ ಹೇರಿದ್ದ ಕೇಂದ್ರ ಸರಕಾರದ ಆದೇಶವನ್ನು ವಜಾಗೊಳಿಸಿ ಕಾಂಗ್ರೆಸ್ ಪಕ್ಷದ ಸರಕಾರ ಮುಂದುವರಿಯಲು ಸುಪ್ರೀಕೋರ್ಟ್ ಅವಕಾಶ ನೀಡಿದ ನಂತರ ಮೋದಿ ವಿರುದ್ಧ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
 
ಸಂವಿಧಾನದ ನೀತಿಗಳು ಮತ್ತು ಪ್ರಜಾಪ್ರಭುತ್ವದ ನಿಯಮಗಳನ್ನು ಉಲ್ಲಂಘಿಸಿದವರು ಇಂದು ಹೀನಾಯ ಸೋಲನುಭವಿಸಿದ್ದಾರೆ. ಕೇಂದ್ರ ಸರಕಾರ ಮೂರನೇ ಬಾರಿಗೆ ಮುಖಭಂಗ ಅನುಭವಿಸಿದೆ ಎಂದು ಲೇವಡಿ ಮಾಡಿದ್ದಾರೆ. 
 
ಕಳೆದ ಜನೆವರಿ ತಿಂಗಳಲ್ಲಿ ಅರುಣಾಚಲ ರಾಜ್ಯದಲ್ಲಿ ಕಾಂಗ್ರೆಸ್ ಅಡಳಿತರೂಢ ಪಕ್ಷದ ಮುಖ್ಯಮಂತ್ರಿ ನಬಾಮ್ ಟುಕಿ ಅವರ ಸರಕಾರವನ್ನು ಮೋದಿ ಸರಕಾರ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿತ್ತು.
 
ಮೋದಿ ಸರಕಾರ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸಂವಿಧಾನವನ್ನು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿ ಅಧಿಕಾರವನ್ನು ಕಬಳಿಸಲು ಯತ್ನಿಸುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷ ಸದಾ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದಿದೆ ಎಂದು ತಿಳಿಸಿದ್ದಾರೆ.
 
ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾತನಾಡಿ, ಪ್ರಧಾನಿ ಮೋದಿಗೆ ಪ್ರಜಾಪ್ರಭುತ್ವದ ಬಗ್ಗೆ ವಿವರಣೆ ನೀಡಿದ ಸುಪ್ರೀಂಕೋರ್ಟ್‌ಗೆ ಧನ್ಯವಾದಗಳು ಎಂದು ತಿರುಗೇಟು ನೀಡಿದ್ದರು.  

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ