ಗೋಮಾಂಸ ತಿನ್ನದಿರಲಾಗುವುದಿಲ್ಲ ಎನ್ನುವವರು ಹರಿಯಾಣಕ್ಕೆ ಬರಬೇಡಿ: ಸಚಿವ ಅನಿಲ್ ವಿಜ್

ಬುಧವಾರ, 10 ಫೆಬ್ರವರಿ 2016 (13:10 IST)
ಗೋಮಾಂಸ ತಿನ್ನದೆ ಬದುಕಲು ಸಾಧ್ಯವಿಲ್ಲ ಎನ್ನುವವರು ನಮ್ಮ ರಾಜ್ಯಕ್ಕೆ ಬರಬೇಡಿ ಎಂದು ಹರಿಯಾಣಾದ ಆರೋಗ್ಯ ಸಚಿವ ಅನಿಲ್ ವಿಜ್  ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

 
ರಾಜ್ಯದಲ್ಲಿ ವಿದೇಶಿಗರಿಗೆ ಗೋಮಾಂಸ ಸೇವನೆಗೆ ವ್ಯವಸ್ಥೆ ಮಾಡಲಾಗುವುದು ಎಂಬ ಮಾತುಗಳು ಕೇಳಿಬಂದಿದ್ದವು. ಈ ಕುರಿತು ವರದಿಗಾರರು ಕೇಳಿದ್ದಕ್ಕೆ ಪ್ರತಿಕ್ರಿಯಿಸುತ್ತಿದ್ದ ವಿಜ್, ಕೆಲವು ರಾಷ್ಟ್ರಗಳಲ್ಲಿನ ಆಹಾರ ಪದ್ಧತಿಗಳು ನಮಗೆ ಸರಿ ಹೋಗುವುದಿಲ್ಲ. ಹೀಗಾಗಿ ನಾವು ಅಲ್ಲಿಗೆ ಭೇಟಿ ನೀಡುವುದಿಲ್ಲ. ಅದೇ ರೀತಿ ಗೋಮಾಂಸ ತಿನ್ನದೇ ನಮ್ಮಿಂದ ಬದುಕಲಾಗುವುದಿಲ್ಲ ಎನ್ನುವವರು ನಮ್ಮ ರಾಜ್ಯಕ್ಕೆ ಬರಬೇಡಿ ಎಂದು ಹೇಳಿದ್ದಾರೆ.
 
ಹರಿಯಾಣಕ್ಕೆ ಭೇಟಿ ನೀಡುವ ವಿದೇಶಿಗರಿಗಾಗಿ ನಾವು ಜಾರಿಗೆ ತಂದಿರುವ ಕಾನೂನನ್ನು ಸಡಲಿಸಿ, ಗೋಮಾಂಸ ಸೇವಿಸಲು ಅವಕಾಶ ನೀಡಲಾಗುತ್ತದೆ ಎಂಬುದರಲ್ಲಿ ಸತ್ಯವಿಲ್ಲ. ಸ್ವತಃ ಮುಖ್ಯಮಂತ್ರಿ ಮನೋಹರ ಲಾಲ್ ಕಟ್ಟರ್ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ ಎಂದು ಸಚಿವ್ ವಿಜ್ ತಿಳಿಸಿದ್ದಾರೆ. 
 
ಬಿಜೆಪಿ ನೇತೃತ್ವದ ಸರ್ಕಾರವಿರುವ ಹರಿಯಾಣದಲ್ಲಿ ಕಳೆದ ವರ್ಷದಿಂದ ಗೋರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲಾಗಿದ್ದು, ಗೋ ಸಾಗಣಿಕೆ ಮತ್ತು ಹತ್ಯೆಯನ್ನು ಪ್ರತಿಬಂಧಿಸಲಾಗಿದೆ.
 
ಈ ಕಾನೂನನ್ನು ಉಲ್ಲಂಘಿಸಿದವರಿಗೆ ಮೂರರಿಂದ 10 ವರ್ಷ ಜೈಲು ಶಿಕ್ಷೆಯನ್ನು ನಿಗದಿ ಪಡಿಸಲಾಗಿದೆ.

ವೆಬ್ದುನಿಯಾವನ್ನು ಓದಿ