ವಿಚಿತ್ರ ಆದ್ರೂ ಸತ್ಯ: ಎಸಿ ಗಾಳಿ ಸೇವಿಸಿ ಮೂವರು ಯುವಕರ ಸಾವು

ಮಂಗಳವಾರ, 22 ಜುಲೈ 2014 (15:36 IST)
ಕಾರಿನಲ್ಲಿ ಎಸಿ ಆನ್ ಮಾಡಿ ತಂಪಾದ ಗಾಳಿ ಸೇವಿಸುತ್ತಾ ಕುಳಿತಿದ್ದ ಮೂವರು ವ್ಯಕ್ತಿಗಳು ಸಾವನ್ನಪ್ಪಿದ ಘಟನೆ ರಾಜಧಾನಿಯಲ್ಲಿ ನಡೆದಿದೆ. ಎಸಿಯಲ್ಲಿದ್ದ ವಿಷಪೂರಿತ ಕಾರ್ಬನ್ ಮೊನಾಕ್ಸೈಡ್ ಅವರ ಸಾವಿಗೆ ಕಾರಣವಾಗಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ದಕ್ಷಿಣ ದೆಹಲಿಯ  ಐಎನ್‌ಎ ಮಾರುಕಟ್ಟೆ ಬಳಿಯಿರುವ ಲಕ್ಷ್ಮಿಬಾಯಿ ಕಾಲೋನಿಯಲ್ಲಿ ಮೂವರು ವ್ಯಕ್ತಿಗಳು ಸಂಜೆ 7.15 ಗಂಟೆಗೆ ಹೊಂಡಾ ಸಿಟಿ ಕಾರಿನಲ್ಲಿ ಪ್ರಜ್ಞಾಹೀನರಾಗಿ ಕುಳಿತಿರುವುದು ಕಂಡ ನೆರೆಹೊರೆಯವರು ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕಾರಿನಲ್ಲಿದ್ದವರು ಲಕ್ಷ್ಮಣ್, ಬಲ್ವಿಂದರ್ ಮತ್ತು ನಿಶಾಂತ್ ದತ್ತಾ ಎಂದು ಪೊಲೀಸರು ಗುರುತಿಸಿದ್ದಾರೆ. 
 
ಮೂವರು ಯುವಕರು ಪ್ರರ್ದರ್ಶನ ಕಾರ್ಯಕ್ರಮವೊಂದಕ್ಕೆ 1.5 ಲಕ್ಷ ರೂಪಾಯಿಗಳನ್ನು ಪಾವತಿಸಲು ತೆರಳಿದ್ದರು. ಆದರೆ, ಕಾರಿನಲ್ಲಿ ಹಣ ಪತ್ತೆಯಾಗಿಲ್ಲ. ಯುವಕರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಕಾರಿನಲ್ಲಿ ವಾಂತಿ ಕೂಡಾ ಮಾಡಿಕೊಂಡಿದ್ದಾರೆ ಎಂದು ಕಾರಿನಲ್ಲಿದ್ದ ಯುವಕನೊಬ್ಬನ ಸಂಬಂಧಿ ನಿಶಾಂತ್ ತಿಳಿಸಿದ್ದಾರೆ.
 
ಪೊಲೀಸ್ ಮೂಲಗಳ ಪ್ರಕಾರ, ಕಾರಿನ ಕಿಟಕಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಿ ಎಸಿ ಹಾಕಿದ್ದರಿಂದ ಎಸಿಯಲ್ಲಿ ವಿಷಪೂರಿತ ಕಾರ್ಬನ್ ಮೊನಾಕ್ಸೈಡ್ ಗಾಳಿ ಸೇವನೆಯಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ