ಮೂವರು ಟಿಡಿಪಿ ನಾಯಕರನ್ನು ಒತ್ತೆಯಾಳಾಗಿ ಇರಿಸಿಕೊಂಡ ಮಾವೋವಾದಿಗಳು

ಮಂಗಳವಾರ, 6 ಅಕ್ಟೋಬರ್ 2015 (19:58 IST)
ವಿಶಾಖಪಟ್ಟಣಂ ಜಿಲ್ಲೆಯಲ್ಲಿ ನಕ್ಸಲರು ಮೂವರು ಟಿಡಿಪಿ ನಾಯಕರನ್ನು ಒತ್ತೆಯಾಳಾಗಿ ಇರಿಸಿಕೊಂಡ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ನಕ್ಸಲರು ತಮ್ಮ ಸಂಪರ್ಕ ಜಾಲದ ಮೂಲಕ ಜಿಲ್ಲೆಯ ಧಾರಕೊಂಡಾ ಪಟ್ಟಣದ ಬಳಿ ಮೂವರು ಟಿಡಿಪಿ ನಾಯಕರನ್ನು ಭೇಟಿಯಾಗುವಂತೆ ಕೋರಿದ್ದಾರೆ. ನಕ್ಸಲರ ಕೋರಿಕೆ ಮೇರೆಗೆ ಟಿಡಿಪಿ ನಾಯಕರು ನಕ್ಸಲರ ಭೇಟಿಗೆ ತೆರಳಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪ್ರವೀಣ್ ತಿಳಿಸಿದ್ದಾರೆ.
 
ಟಿಡಿಪಿ ನಾಯಕರಿಗೆ ಯಾವುದೇ ರೀತಿಯ ತೊಂದರೆ ಮಾಡುವುದಿಲ್ಲ ಎನ್ನುವ ನಕ್ಸಲರ ಭರವಸೆಯ ಮೇರೆಗೆ ಟಿಡಿಪಿ ನಾಯಕ ಎಂ.ಬಾಲಯ್ಯ, ಎಂ.ಮಹೇಶ್ ಮತ್ತು ವಿ.ಬಾಲಯ್ಯ ಅವರನ್ನು ಭೇಟಿಯಾಗಲು ತೆರಳಿದ್ದಾಗ ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 
 
ಮಾವೋವಾದಿಗಳು ಟಿಡಿಪಿ ನಾಯಕರನ್ನು ಪೂರ್ವ ಗೋದಾವರಿ ಜಿಲ್ಲೆಯ ಗಡಿಭಾಗದಲ್ಲಿರುವ ಘೋರ ಅರಣ್ಯಪ್ರದೇಶದೊಳಗೆ ಕರೆದುಕೊಂಡು ಹೋಗಿರಬಹುದು. ಅವರು ಯಾವ ಬೇಡಿಕೆಗಳನ್ನು ಮಂಡಿಸುತ್ತಾರೆ ಎನ್ನುವುದನ್ನು ಕಾದು ನೋಡಲಾಗುತ್ತಿದೆ ಎಂದು ಹೇಳಿದ್ದಾರೆ.
 
ಅರಣ್ಯ ಪ್ರದೇಶದೊಳಗೆ ನಡೆಯುತ್ತಿರುವ ಬೌಕ್ಸೈಟ್ ಗಣಿಗಾರಿಕೆಯನ್ನು ನಿಲ್ಲಿಸುವಂತೆ ಸರಕಾರದ ಮೇಲೆ ಒತ್ತಡ ಹೇರಲು ಮಾವೋವಾದಿಗಳು ಟಿಡಿಪಿ ನಾಯಕರನ್ನು ಅಪಹರಿಸಿರಬಹುದು ಎಂದು ಶಂಕಿಸಲಾಗಿದೆ. 
 

ವೆಬ್ದುನಿಯಾವನ್ನು ಓದಿ