ಜಯಾಗೆ 1.5 ಲಕ್ಷ ಮತಗಳ ಅಂತರದ ಭರ್ಜರಿ ಜಯ

ಮಂಗಳವಾರ, 30 ಜೂನ್ 2015 (14:39 IST)
ನಿರೀಕ್ಷೆಯಂತೆ ಆರ್.ಕೆ.ನಗರ್ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ. ಸಿಪಿಎಂನ ಮಹೇಂದ್ರನ್ ಅವರನ್ನು 1.5 ಲಕ್ಷ ಮತಗಳ ಭಾರೀ ಅಂತರದಿಂದ ಮಣ್ಣು ಮುಕ್ಕಿಸಿರುವ ಜಯಾ 1,60,921 ಮತಗಳನ್ನು ಗಳಿಸಿದ್ದಾರೆ.  ಸಿ. ಮಹೇಂದ್ರನ್ 9,669 ಮತಗಳನ್ನಷ್ಟೇ ಪಡೆದಿದ್ದು, ಚುನಾವಣೆ ಸ್ಪಷ್ಟವಾಗಿ ಏಕ ಪಕ್ಷಿಯವಾಗಿತ್ತು ಎಂಬುದು ಸಾಬೀತಾಗಿದೆ.
ತಮ್ಮನ್ನು ಗೆಲ್ಲಿಸಿದ ಮತದಾರರಿಗೆ ಮತ್ತು ಎಐಡಿಎಂಕೆ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಹೇಳಿರುವ ಜಯಾ 2016ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಹ ತಾವೇ ಪ್ರಭುತ್ವ ಸಾಧಿಸುವ ಸುಳಿವು ನೀಡಿದ್ದಾರೆ. 
 
ಮತ ಎಣಿಕೆ ಪ್ರಾರಂಭವಾಗುತ್ತಿದ್ದಂತೆ ಆಕೆಯ ಬೆಂಬಲಿಗರು ಸಂಭ್ರಮಾಚರಣೆಯನ್ನು ಪ್ರಾರಂಭಿಸಿದ್ದರು. ಫಲಿತಾಂಶಕ್ಕೂ ಮುನ್ನವೇ ಅವರ ನಿವಾಸ ಮತ್ತು ಎಐಡಿಎಂಕೆ ಮುಖ್ಯ ಕಚೇರಿಯ ಮುಂದೆ ಜಮಾಯಿಸಿದ್ದ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸಿಹಿ ಹಂಚಿ ಗೆಲುವು ನಿಶ್ಚಿತ ಎಂಬ ಸೂಚನೆಯನ್ನು ಅಳುಕಿಲ್ಲದೇ ನೀಡಿದ್ದರು. 
 
ಜಯಾ ಮತ್ತು ಮಹೇಂದ್ರನ್ ಹೊರತು ಪಡಿಸಿದರೆ ಸಾಮಾಜಿಕ ಹೋರಾಟಗಾರ ಟ್ರಾಫಿಕ್ ರಾಮಸ್ವಾಮಿ ಸೇರಿದಂತೆ 26 ಮಂದಿ ಜಯಾ ಪರ ಸ್ಪರ್ಧಿಸಿದ್ದರು.
 
ಮುಖ್ಯ ವಿರೋಧ ಪಕ್ಷಗಳಾದ ಡಿಎಂಕೆ, ಡಿಎಂಡಿಕೆ, ಬಿಜೆಪಿ, ಕಾಂಗ್ರೆಸ್, ಪಿಎಂಕೆ ಚುನಾವಣೆಯನ್ನು ಬಹಿಷ್ಕರಿಸಿದ್ದವು. 

ವೆಬ್ದುನಿಯಾವನ್ನು ಓದಿ