ಚಿತ್ತೂರು ಎನ್‌ಕೌಂಟರ್‌ನ 6 ಮಂದಿ ಶವ ಸಂಸ್ಕಾರಕ್ಕೆ ತಡೆ: ಇಂದು ವಿಚಾರಣೆ

ಶುಕ್ರವಾರ, 10 ಏಪ್ರಿಲ್ 2015 (11:53 IST)
ಇಲ್ಲಿನ ಅರಣ್ಯ ಪ್ರದೇಶದಲ್ಲಿ ನಡೆಸಲಾಗಿದ್ದ ಎನ್‌ಕೌಂಟರ್ ಕಾರ್ಯಾಚರಣೆಯಲ್ಲಿ ಮೃತಪಟ್ಟಿರುವ 6 ಮಂದಿ ಸ್ಮಗ್ಲರ್‌ಗಳ ಶವ ಸಂಸ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ನಿನ್ನೆ ತಡೆ ನೀಡಿದ್ದು, ಪ್ರಕರಣದ ವಿಚಾರಣೆ ಇಂದು ನಡೆಯಲಿದೆ.   
 
6 ಮಂದಿ ಮೃತರಲ್ಲಿ ಓರ್ವ ಸಸಿಕುಮಾರ್ ಎಂಬಾತನಿದ್ದು, ಅವರ ಪತ್ನಿ ತನ್ನ ಪತಿಯ ಮರು ಮರಣೋತ್ತರ ಪರೀಕ್ಷೆ ನಡೆಸಬೇಕೆಂದು ಕೋರಿ ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ನಿನ್ನೆ ಶವ ಸಂಸ್ಕಾರಕ್ಕೆ ತಡೆ ನೀಡಿತ್ತು. ಅಲ್ಲದೆ ಮೃತ ದೇಹಗಳು ಕೆಡದಂತೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಮರಣೋತ್ತರ ಪರೀಕ್ಷೆಗೆ ಇಂದು ಆದೇಶಿಸುವ ಸಾಧ್ಯತೆ ಇದೆ ಎನ್ನಲಾಗಿದೆ. 
 
ನಿನ್ನೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ನೀಡಿದ್ದರು. ಬಳಿಕ ಆಗಮಿಸಿದ ತಮಿಳಿನ ಖ್ಯಾತ ನಟ ವಿಜಯಕಾಂತ್ ಕೂಡ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ತಲಾ 50 ಸಾವಿರ ಪರಿಹಾರ ನೀಡಿದರು.   
 
ಪ್ರಕರಣ ಪರಿಣಾಮ ಆಂಧ್ರ ಪ್ರದೇಶ ಸರ್ಕಾರದ ವಿರುದ್ಧ ತಮಿಳುನಾಡಿನಾದ್ಯಂತ ಪ್ರಸ್ತುತವೂ ಖಂಡನೆ ವ್ಯಕ್ತವಾಗುತ್ತಿದ್ದು, ರೈತರು, ಸಂಘಟನೆಗಳು ಹಾಗೂ ಸಾರ್ವಜನಿಕರು ಆಂಧ್ರ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ. ಅಲ್ಲದೆ ಪ್ರತಿಭಟನೆಗಳೂ ಮುಂದುವರಿದಿವೆ. 
 
ಇನ್ನು ಮೃತ ದೇಹಗಳ ವೀಕ್ಷಣೆಗೆಂದು ಆಗಮಿಸುತ್ತಿರುವ ರಾಜಕೀಯ ಮುಖಂಡರೂ ಕೂಡ ಘಟನೆಯನ್ನು ಖಂಡಿಸುತ್ತಿದ್ದು, ಪ್ರಕಣವನ್ನು ಉನ್ನತ ಮಟ್ಟದಲ್ಲಿ ತನಿಖೆ ನಡೆಸಬೇಕು. ಆ ಮೂಲಕ ಮೃತರ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ