ಹಿಂಸಾಚಾರಕ್ಕೆ ತಿರುಗಿದ ಮೀಸಲಾತಿ ಹೋರಾಟ: ಸೇನೆ ನಿಯೋಜನೆ

ಬುಧವಾರ, 26 ಆಗಸ್ಟ್ 2015 (12:05 IST)
ಗುಜರಾತ್‌ನಲ್ಲಿ ಮೀಸಲಾತಿ ಕೋರಿ ಪಟೇಲ್ ಸಮುದಾಯ ನಡೆಸುತ್ತಿರುವ ಹೋರಾಟ ಗಂಭೀರ ರೂಪ ಪಡೆದುಕೊಂಡಿದ್ದು ಶಾಂತಿ ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. 2002ರ ಕೋಮುದಂಗೆಯ ಬಳಿಕ ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಶಾಂತಿ, ಸುವ್ಯವಸ್ಥತೆಗಾಗಿ ಸೇನೆಯನ್ನು ನಿಯೋಜಿಸಲಾಗಿದ್ದು, ಸೇನಾ ಮತ್ತು ಅರಸೇನಾ ಪಡೆಗಳು ಪರಿಸ್ಥಿತಿಯನ್ನು ಸುಸ್ಥಿತಿಗೆ ತರಲು ಹರಸಾಹಸ ನಡೆಸುತ್ತಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಹಲವು ನಗರಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಕೇಂದ್ರ ಸರ್ಕಾರ ಗುಜರಾತ್‌ಗೆ 5 ಸಾವಿರ ಅರೆಸೇನಾ ಪಡೆ ಸಿಬ್ಬಂದಿ ಕಳುಹಿಸಿದೆ.
 
ಪಟೇಲ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಇಂದು ಗುಜರಾತ್‌ ಬಂದ್‌ಗೆ ಕರೆ ನೀಡಿದ್ದು, ಹೋರಾಟವೀಗ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್‌ ಮಾಡಿದರಲ್ಲದೇ, ಕೆಲವು ಕಡೆಗಳಲ್ಲಿ ಅಶ್ರುವಾಯು ಷೆಲ್‌ ಪ್ರಯೋಗಿಸಿದ್ದಾರೆ. ಕಲ್ಲೂ ತೂರಾಟ ನಡೆಯುತ್ತಿದ್ದು, ಬಸ್ ವಾಹನಗಳಿಗೆ ಬೆಂಕಿ ಹಚ್ಚುವುದರ ಮೂಲಕ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. 
 
ರಾಜ್ಯದ ಹಲವು ಜಿಲ್ಲೆಗಳಲ್ಲಿ ರಸ್ತೆಗಳೆಲ್ಲ ಬಿಕೋ ಎನ್ನುತ್ತಿದ್ದು, ವಾಣಿಜ್ಯ ವಹಿವಾಟು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. 
 
ಶಿಕ್ಷಣ ಮತ್ತು ಉದ್ಯೋಗ ರಂಗದಲ್ಲಿ ಮೀಸಲಾತಿ ಕೋರಿ 22 ವರ್ಷದ ಕಾಮರ್ಸ್ ಪದವೀಧರ್ ಹಾರ್ದಿಕ್ ಪಟೇಲ್ ನೇತೃತ್ವದಲ್ಲಿ ಪಟೇಲ್ ಸಮುದಾಯ ಕಳೆದ ಹಲವು ದಿನಗಳಿಂದ ಹೋರಾಟ ನಡೆಸುತ್ತಿದೆ. 
 
ಕಳೆದ ವಾರ ಇದೇ ಕಾರಣಕ್ಕೆ ಸೂರತ್‌ನಲ್ಲಿ ಬೃಹತ್ ಸಭೆ ನಡೆಸಿದ್ದ ಹಾರ್ದಿಕ್ ನಿನ್ನೆ  ಗುಜರಾತ್‌ನ ಅಹಮದಾಬಾದ್‌ನಲ್ಲಿ ಬೃಹತ್‌ ಸಭೆಯನ್ನು ನಡೆಸಿದ್ದರು. ಅವರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ ನಂತರ ಹೋರಾಟ ಹಿಂಸಾಚಾರದ ರೂಪಕ್ಕೆ ಪರಿವರ್ತನೆಗೊಂಡಿದೆ. 
 
ಜಿಎಂಡಿಸಿ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಹಾರ್ದಿಕ್‌ ಪಟೇಲ್‌ ಅವರನ್ನು ನಿನ್ನೆ ರಾತ್ರಿ ಪೊಲೀಸರು ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆ ಮಾಡಿದ್ದರು. ಹಾರ್ದಿಕ್‌ ಅವರು ಅನುಮತಿ ಇಲ್ಲದೆ ಸತ್ಯಾಗ್ರಹ ಕೈಗೊಂಡಿದ್ದರು ಎಂಬ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. 
 
ಕಳೆದ ರಾತ್ರಿ ರಾಜ್ಯದ ಹಲವೆಡೆ ಹಿಂಸಾಚಾರ ಸಂಭವಿಸಿ ಸಾರ್ವಜನಿಕ ಆಸ್ತಿ ಪಾಸ್ತಿ ಧ್ವಂಸವಾಗಿದೆ. ಇಂದಿನ ಬಂದ್‌ನಲ್ಲಿ ಮತ್ತೊಮ್ಮೆ ಹಿಂಸಾಚಾರ ಸಂಭವಿಸಬಾರದೆಂದು ಭಾರಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಬಂದ್‌ ಸದ್ಯಕ್ಕೆ ಶಾಂತಿಯುತವಾಗಿ ನಡೆಯುತ್ತಿದೆ. ಅಹಮದಾಬಾದ್‌ನಲ್ಲಿ  ಶಾಲಾ ಕಾಲೇಜ್‌‌ಗಳು ಮುಚ್ಚಿವೆ. 
 
ಬುಧವಾರ ಅಹಮದಾಬಾದ್ ಸೂರತ್ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಹಲವು ಕಡೆ ಅಂತರ್ಜಾಲ, ಮೊಬೈಲ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.  ಅಂತರ್ಜಾಲ, ಮೊಬೈಲ್ ಸೇವೆಗಳಿಂದ ಹೋರಾಟದ ಕಾವು  ಹೆಚ್ಚಬಹುದು ಎಂಬ ಕಾರಣಕ್ಕೆ ಸೇವೆಯನ್ನು ರದ್ದುಗೊಳಿಸಲಾಗಿದೆ. 
 
ಮುಖ್ಯಮಂತ್ರಿ ಆನಂದಿ ಬೆನ್ ನಿವಾಸಕ್ಕೆ ಭಾರೀ ಭದ್ರತೆಯನ್ನು ಒದಗಿಸಲಾಗಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಸೈನ್ಯವನ್ನು ಒದಗಿಸುವಂತೆ ಬೆನ್ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
 
ಆದರೆ ತಮ್ಮ ಬೇಡಿಕೆಯನ್ನು ಈಡೇರಿಸದಿದ್ದರ 48 ಗಂಟೆಗಳ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಹಾರ್ದಿಕ್ ಪಟೇಲ್ ಘೋಷಿಸಿದ್ದಾರೆ. 
 
ನಿನ್ನೆ ಅಪಾರ ‍ಪ್ರಮಾಣದಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಪಾಟಿದಾರ್‌ ಅನಾಮತ್‌ ಆಂದೋಲನ ಸಮಿತಿಯ ಸಂಚಾಲಕ, 22ರ ಯುವಕ ಹಾರ್ದಿಕ್‌ ಪಟೇಲ್‌ , ಬಿಜೆಪಿ ಪಕ್ಷ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೀಸಲಾತಿ ನೀಡದಿದ್ದರೆ ಅದನ್ನು ಕಸಿದುಕೊಳ್ಳಲು ಹಿಂದೆ–ಮುಂದೆ ನೋಡುವುದಿಲ್ಲ ಎಂದು ಅವರು ಘೋಷಿಸಿದ್ದಾರೆ. 
 
ಆಡಳಿತದ ಚುಕ್ಕಾಣಿ ಹಿಡಿದಿರುವ ಆನಂದಿ ಬೆನ್ ಅವರಿಗೆ ತಮ್ಮದೇ ಸಮುದಾಯದವರು ನಡೆಸುತ್ತಿರುವ ಹೋರಾಟ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಆದರೆ ಸುಪ್ರೀಂಕೋರ್ಟ್‌ ಮಾರ್ಗಸೂಚಿಯ ಪ್ರಕಾರ ರಾಜ್ಯದಲ್ಲಿ ಬಹುಸಂಖ್ಯಾತರಾಗಿರುವ ಪಟೇಲ್ ಸಮುದಾಯವನ್ನು ಓಬಿಸಿ ಅಡಿ ತರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಪಟೇಲ್ ಸಮುದಾಯ ಗುಜರಾತ್‌ನಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಪ್ರಬಲವಾಗಿದೆ. 
 
ಆದರೆ ಪಟೇಲ್ ಸಮುದಾಯದ ಬೆಂಬಲವಿಲ್ಲದೆ ಬಿಜೆಪಿ ಗುಜರಾತ್‌ನಲ್ಲಿ ಆಡಳಿತಕ್ಕೆ ಮರಳುವುದು ಸಾಧ್ಯವಿಲ್ಲವೆಂಬುದು ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅದಕ್ಕೆ ಪೂರಕವಾಗಿ  ‘1985ರಲ್ಲಿ ಕಾಂಗ್ರೆಸ್‌ ಪಕ್ಷವನ್ನು ನಾವು ಗುಜರಾತ್‌ನಿಂದ ಹೊರ ದಬ್ಬಿದೆವು‌. ಈಗ ಬಿಜೆಪಿ ಸರದಿ. ಮತ್ತೆ ಗುಜರಾತ್‌ ಮಣ್ಣಿನಿಂದ ಕಮಲ ಅರಳುವುದು ಅಸಾಧ್ಯ. ನಮ್ಮ ಪರ ನ್ಯಾಯ ನೀಡಿದರೆ ಮಾತ್ರ ಕಮಲಕ್ಕೆ ನಮ್ಮ ಬೆಂಬಲ ಎಂದು ಹಾರ್ದಿಕ್ ಬಿಜೆಪಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾನೆ.

ವೆಬ್ದುನಿಯಾವನ್ನು ಓದಿ