ಇಂದು ಮೂರು ವಿಧಾನಸಭಾ ಕ್ಷೇತ್ರ, ತಾಲ್ಲೂಕ್-ಜಿಲ್ಲಾ ಪಂಚಾಯತ್ ಚುನಾವಣೆ

ಶನಿವಾರ, 13 ಫೆಬ್ರವರಿ 2016 (09:08 IST)
ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಾಗೂ ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ ಮೊದಲ ಹಂತದ ಚುನಾವಣೆ ಇಂದು ನಡೆಯುತ್ತಿದೆ
 
ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 37 ಅಭ್ಯರ್ಥಿಗಳು ಕಣಕ್ಕಿಳಿದಿದ್ದು ಚುನಾವಣಾಧಿಕಾರಿಗಳು ಉಪ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. 
 
ಹೆಬ್ಬಾಳದಲ್ಲಿ ಬಿಜೆಪಿಯಿಂದ ವೈ.ಎ.ನಾರಾಯಣಸ್ವಾಮಿ, ಕಾಂಗ್ರೆಸ್‌ನಿಂದ ಜಾಫರ್ ಶರೀಫ್ ಮೊಮ್ಮಗ ಸಿ.ಕೆ.ರೆಹಮಾನ್ ಷರೀಫ್, ಜೆಡಿಎಸ್‌ನ ಇಸ್ಮಾಯಿಲ್ ಷರೀಫ್ ಸೇರಿದಂತೆ 22 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ಬಿಜೆಪಿಯ ಕೆ.ಶಿವನಗೌಡ ನಾಯಕ್, ಕಾಂಗ್ರೆಸ್‌ನ ಎ.ರಾಜಶೇಖರ ನಾಯಕ್, ಜೆಡಿಎಸ್‌ನ ಕರಿಯಮ್ಮ ಜಿ. ನಾಯಕ್ ಸೇರಿದಂತೆ ನಾಲ್ಕು ಮಂದಿ ಚುನಾವಣಾ ಕಣದಲ್ಲಿದ್ದಾರೆ. ಇನ್ನು ಬೀದರ್‌ನಲ್ಲಿ ಬಿಜೆಪಿಯ ಪ್ರಕಾಶ್ ಖಂಡ್ರೆ, ಕಾಂಗ್ರೆಸ್‌ನ ರಹೀಮ್ ಖಾನ್, ಜೆಡಿಎಸ್‌ನ ಎಂ.ಡಿ.ಅಯಾಜ್ ಖಾನ್‌ ಸೇರಿದಂತೆ 11 ಮಂದಿ ಚುನಾವಣಾ ಕಣದಲ್ಲಿದ್ದಾರೆ.
 
ಅಧಿಕಾರ ಹಿಡಿಯಲು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಅಬ್ಬರದ ಪ್ರಚಾರವನ್ನು ನಡೆಸಿದ್ದು, ಅದೃಷ್ಟಯಾರ ಕೈ ಹಿಡಿಯಲಿದೆ ಎಂದು ಕಾದು ನೋಡಬೇಕಿದೆ.
 
15 ಜಿಲ್ಲಾ ಪಂಚಾಯತಿಯ 552 ಕ್ಷೇತ್ರಗಳ ಪೈಕಿ 550 ಕ್ಷೇತ್ರಗಳು ಮತ್ತು 95 ತಾಲೂಕು ಪಂಚಾಯತಿಯ 1,945 ಕ್ಷೇತ್ರಗಳ ಪೈಕಿ 1,934 ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ. ರಾಮನಗರ ಜಿಲ್ಲೆಯ ಒಂದು ತಾಲೂಕು ಪಂಚಾಯತಿ ಕ್ಷೇತ್ರ ಮತ್ತು ಬೆಳಗಾವಿ ಜಿಲ್ಲೆಯ ಎರಡು ಜಿಲ್ಲಾ ಪಂಚಾಯತ್‌ ಕ್ಷೇತ್ರ ಹಾಗೂ 10 ತಾಲೂಕು ಪಂಚಾಯತ್‌ ಕ್ಷೇತ್ರಗಳಿಗೆ ಈಗಾಗಲೇ ಅವಿರೋಧ ಆಯ್ಕೆ ನಡೆದಿದೆ.
 
ಮೊದಲ ಹಂತದ ತಾಲೂಕು ಹಾಗೂ ಜಿಲ್ಲಾ ಪಂಚಾಯತ್‌ ಚುನಾವಣೆಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ತುಮಕೂರು, ಬೆಳಗಾವಿ, ಬಾಗಲಕೋಟೆ, ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನದ ಸಮಯವನ್ನು ನಿಗದಿ ಪಡಿಸಲಾಗಿದೆ.

ವೆಬ್ದುನಿಯಾವನ್ನು ಓದಿ