ಕುಖ್ಯಾತ ಮಾವೋವಾದಿ ಸಿಪಿಐ ಮುಖಂಡ ರೂಪೇಶ್ ಬಂಧನ

ಮಂಗಳವಾರ, 5 ಮೇ 2015 (14:52 IST)
ತಮಿಳುನಾಡು ರಾಜ್ಯ ಮಾವೋವಾದಿಗಳಿಗೆ, ಪ್ರತ್ಯೇಕತಾ ತೀವ್ರವಾದಿಗಳಿಗೆ ಸ್ವರ್ಗವಾಗಿ ಪರಿಣಮಿಸಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳಲು ಮಾವೋವಾದಿಗಳು ತಮಿಳುನಾಡಿಗೆ ನುಸಳುತ್ತಿದ್ದಾರೆ. ಖ್ಯಾತ ಸಿಪಿಐ ಮಾವೋವಾದಿ ಮುಖಂಡ 40 ವರ್ಷ ವಯಸ್ಸಿನ ರೂಪೇಶ್ ಮತ್ತು ಆತನ ಪುತ್ನಿಯನ್ನು ಕೊಯಿಮುತ್ತೂರ್‌-ಅವಿನಾಶಿ ರಸ್ತೆಯಲ್ಲಿರುವ ಕರುಮಾದಂಪಟ್ಟಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.  

ಮಾವೋವಾದಿ ರೂಪೇಶ್ ಮತ್ತು ಅತನ ತಂಡ ಕರುಮಾದಂಪಟ್ಟಿಯಲ್ಲಿ ಅಡಗಿಕೊಂಡಿದೆ ಎನ್ನುವ ಮಾಹಿತಿ ಪಡೆದ ಪೊಲೀಸ್ ಅಧಿಕಾರಿ ಹನುಮಂತರಾವ್ ನೇತೃತ್ವದ ಗುಪ್ತಚರ ದಳದ ತಂಡ, ತಮಿಳುನಾಡು ಪೊಲೀಸರ ನೆರವಿನೊಂದಿಗೆ ದಾಳಿ ನಡೆಸಿ ಬೇಕರಿಯಲ್ಲಿ ಕೆಲ ವಸ್ತುಗಳನ್ನು ಖರೀದಿಸುತ್ತಿರುವ ಸಂದರ್ಭದಲ್ಲಿ ರೂಪೇಶ್ ಮತ್ತು ಆತನ ಪತ್ನಿ ಪಿ.ಎ.ಶೈನಾ ಹಾಗೂ ಅನೂಪ್, ಕಣ್ಣನ್ ಮತ್ತು ಈಶ್ವರನ್ ಅವರನ್ನು ಬಂಧಿಸಿದೆ.  

ಆರೋಪಿಗಳಾದ ರೂಪೇಶ್, ಶೈನಾ ಮತ್ತು ಅನೂಪ್ ಕೇರಳದಲ್ಲಿ ಹಲವಾರು ಕುಕೃತ್ಯಗಳನ್ನು ನಡೆಸಿ ಪೊ1ಲೀಸರಿಗೆ ಬೇಕಾಗಿದ್ದಾರೆ. ಅವರ ವಿರುದ್ಧ 30 ಪ್ರಕರಣಗಳು ದಾಖಲಾಗಿವೆ, ಆರೋಪಿ ರೂಪೇಶ್ ತಂಡದಲ್ಲಿ 50 ಸಶಕ್ತ ಜನರ ತಂಡವಿದ್ದು, ತನ್ನೊಂದಿಗೆ ಸದಾ ಎಕೆ-47 ರೈಫಲ್ ಹೊಂದಿರುತ್ತಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರೂಪೇಶ್ ಆರಂಭದಲ್ಲಿ ಪೀಪಲ್ಸ್ ವಾರ್ ಗ್ರೂಪ್‌ ತಂಡದಲ್ಲಿದ್ದು ನಂತರ ಸಿಪಿಐ(ಮಾವೋವಾದಿ) ತಂಡದ ಸದಸ್ಯನಾಗಿದ್ದನು. ಕಣ್ಣನ್ ಮತ್ತು ಈಶ್ವರನ್ ತಮಿಳುನಾಡಿನಲ್ಲಿ ಹಲವು ಪ್ರಕರಣಗಳಲ್ಲಿ  ಆರೋಪಿಯಾಗಿದ್ದಾರೆ.

ರೂಪೇಶ್ ಬಂಧನದ ಕುರಿತಂತೆ ಕೊನೆಯ ಘಳಿಗೆಯವರೆಗೆ ತಮಿಳುನಾಡು ಪೊಲೀಸರಿಗೆ ಮಾಹಿತಿಯಿರಲಿಲ್ಲ. ನಂತರ ಆಂಧ್ರ ಪೊಲೀಸ್ ಅಧಿಕಾರಿಗಳ ತಂಡ ಅವರ ಸಹಾಯ ಬಯಸಿದಾಗ ಮಾತ್ರ ಮಾಹಿತಿ ಬಹಿರಂಗವಾಗಿದೆ. ಆರೋಪಿಗಳನ್ನು ವಿಚಾರಣೆಗಾಗಿ ರಹಸ್ಯ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ