ದುರಂತ ಅಂತ್ಯ ಕಂಡ ಫೇಸ್ಬುಕ್ ಪ್ರೀತಿ : ವಯಸ್ಸಿನ ಬಗ್ಗೆ ಸುಳ್ಳು ಹೇಳಿದ್ದಕ್ಕೆ ಮಹಿಳೆಯ ಕೊಲೆ

ಸೋಮವಾರ, 21 ಏಪ್ರಿಲ್ 2014 (17:24 IST)
ಮೂರು ಮಕ್ಕಳ ತಾಯಿಯೊಬ್ಬರು ಮೂರು ವರ್ಷಗಳಿಂದ ತನ್ನ ಫೇಸ್ಬುಕ್ ಗೆಳೆಯನಾಗಿರುವ ವ್ಯಕ್ತಿಯಿಂದ ಗುಂಡಿನ ದಾಳಿಗೊಳಗಾಗಿ ಸಾವನ್ನಪ್ಪಿರುವ ದಾರುಣ ಘಟನೆ ಮಧ್ಯಪ್ರದೇಶದಲ್ಲಿ ವರದಿಯಾಗಿದೆ. 
 
ಮಧ್ಯಪ್ರದೇಶದ ಜಬಲ್‌ಪುರದಲ್ಲಿನ ಚಿತ್ರಸದೃಶ ಅಮೃತ ಶಿಲೆಗಳ ಜಲಪಾತದ ಬಳಿ,45 ರ  ಜ್ಯೋತಿ ಎಂಬಾಕೆಯನ್ನು ಸಾಯಿಸಿದ  ವಿನೀತ್ ಸಿಂಗ್( 22) ನಂತರ ಸ್ವತಃ ಗುಂಡು ಹಾರಿಸಿಕೊಂಡಿದ್ದಾನೆ. ಆತನನ್ನು ಸ್ಥಳೀಯ ಆಸ್ಪತ್ರೆಗೆ ಭರ್ತಿ ಮಾಡಲಾಯಿತಾದರೂ ಆತನು ಸಹ ಮರಣವನ್ನಪ್ಪಿದ್ದಾನೆ. ಆತ ಉತ್ತರ ಪ್ರದೇಶದ ಮುಜಪರ್‌ನಗರಕ್ಕೆ ಸೇರಿದವನಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. 
3 ಮಕ್ಕಳ ತಾಯಿಯಾಗಿರುವ 45 ವರ್ಷದ ಜ್ಯೋತಿ ಕೋರಿ ತನಗೆ 21 ವರ್ಷ ಎಂದು ಫೇಸ್ಪುಕ್‌‌ನಲ್ಲಿ ಸುಳ್ಳು ಮಾಹಿತಿ ಕೊಟ್ಟಿದ್ದರಿಂದ ಸಿಟ್ಟಿಗೆದ್ದ ವಿನೀತ್ ಸಿಂಗ್ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ. 
 
ವಿನೀತ್, ನಿರುದ್ಯೋಗಿಯಾಗಿದ್ದ. ಗೃಹಿಣಿಯಾಗಿದ್ದ ಜ್ಯೋತಿ ಕೋರಿ ಫೇಸ್ಬುಕ್‌ನ್ನು ನಿಯಮಿತವಾಗಿ ಬಳಕೆ ಮಾಡುತ್ತಿದ್ದರು. ರಕ್ತ ಸಿಕ್ತ ವಿನೀತ್ ಹತ್ತಿರದಲ್ಲಿ ವಿಹಾರ ನಡೆಸುತ್ತಿದ್ದ ಜನರ ಬಳಿ ಸಹಾಯ ಪಡೆಯಲು ಪ್ರಯತ್ನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಹೆಚ್ಚು ಕಡಿಮೆ ಮೂರು ವರ್ಷಗಳಿಂದ ಅವರಿಬ್ಬರು ಸಂಪರ್ಕದಲ್ಲಿದ್ದರು ಎಂದು ಜಬಲ್‌ಪುರದ  ಪೋಲಿಸ್ ಸೂಪರಿಂಟೆಂಡೆಂಟ್ ಹರಿನಾರಾಯಣಾಚಾರಿ ಮಿಶ್ರಾ ಹೇಳಿದ್ದಾರೆ. 
 
ಜ್ಯೋತಿ ಪತಿ ನೀರಾವರಿ ಇಲಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದಾರೆ. ಆಕೆಯ ಪತಿ ಮತ್ತು 21 ವರ್ಷದ ಹಿರಿಯ ಮಗಳು ಸೇರಿದಂತೆ ಮೂರು ಮಕ್ಕಳಿಗೂ ಆಕೆಯ ಎಲ್ಲಿದ್ದಾಳೆ ಎಂಬ ಸುಳಿವು ಇರಲಿಲ್ಲ.
 
ಇದು ಕ್ರೋಧಕ್ಕೊಳಗಾಗಿ ನಡೆದ ಕೊಲೆ ಎಂಬಂತೆ ಕಾಣುತ್ತಿದೆ ಎಂದು ಮಿಶ್ರಾ ಶಂಕೆ ವ್ಯಕ್ತ ಪಡಿಸಿದ್ದಾರೆ. ವಿನೀತ್‌ನನ್ನು ಆಸ್ಪತ್ರೆಗೆ ತಂದಾಗ, ಆತ ವಿವಾಹಿತ ಮಹಿಳೆ ಮೋಸ ಮಾಡಿದಳು ಎಂಬ ಮಾತನ್ನು ಪುನರಾವರ್ತಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಅವರಿಬ್ಬರು ತಮ್ಮ  ಛಾಯಾಚಿತ್ರಗಳನ್ನು ಎಂದಿಗೂ ವಿನಿಮಯ ಮಾಡಿಕೊಂಡಿರಲಿಲ್ಲ ಮತ್ತು ಇದು ಅವರ ಪ್ರಥಮ ಭೇಟಿಯಾಗಿತ್ತು. 
 
ಜ್ಯೋತಿ ಎರಡು ದಿನಗಳ ಕಾಲ ತನ್ನ ತಾಯಿಯ ಮನೆಗೆ ಹೋಗಿ ಬರುತ್ತೇನೆ ಎಂದು ತನ್ನ ಕುಟುಂಬದವರಿಗೆ ಹೇಳಿದ್ದರೆ, ವಿನೀತ್  ಕೆಲಸ ಹುಡುಕಿಕೊಂಡು ದೆಹಲಿಗೆ  ಹೋಗಿ ಬರುತ್ತೇನೆ ಎಂದು ತನ್ನ ತಂದೆ-ತಾಯಿಯ ಬಳಿ ತಿಳಿಸಿದ್ದ. ಗುರುವಾರ ತನ್ನ ಮನೆಯಿಂದ ಪೋಷಕರ ಮನೆಗೆ ಹೋಗಿದ್ದ ಜ್ಯೋತಿ ಅಲ್ಲಿಂದ ಮುಂಜಾನೆಯೇ ಹೊರಟು ಬಂದಿದ್ದಳು ಎಂದು ಪೋಲಿಸ್ ಮೂಲಗಳು ತಿಳಿಸಿವೆ.  
 

ವೆಬ್ದುನಿಯಾವನ್ನು ಓದಿ