ಮೋದಿಯವರ ಭೂ ಸ್ವಾಧೀನ ಮಸೂದೆಗೆ ಯಾವತ್ತೂ ಬೆಂಬಲ ನೀಡಲ್ಲ: ಮಮತಾ ಘೋಷಣೆ

ಶನಿವಾರ, 25 ಏಪ್ರಿಲ್ 2015 (14:41 IST)
ನರೇಂದ್ರ ಮೋದಿ ನೇತೃತ್ವದ ಸರಕಾರದ ಉದ್ದೇಶಿತ ಭೂ ಸ್ವಾಧೀನ ಮಸೂದೆಗೆ ತೃಣಮೂಲ ಕಾಂಗ್ರೆಸ್ ಪಕ್ಷ ಬೆಂಬಲ ನೀಡುವುದಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಭೂ ಸ್ವಾಧೀನ ಮಸೂದೆಗೆ ನಮ್ಮ ಪಕ್ಷ ಯಾವತ್ತು ಬೆಂಬಲ ನೀಡುವುದಿಲ್ಲ ಎನ್ನುವುದನ್ನು ಸಂಸತ್ತಿನಲ್ಲಿ ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಒತ್ತಾಯಪೂರ್ವಕವಾಗಿ ಭೂ ಸ್ವಾಧೀನ ಮಾಡುವುದನ್ನು ವಿರೋಧಿಸಿ ನಾನೇ 26 ದಿನಗಳ ಕಾಲ ಅನಿರ್ಧಿಷ್ಠಾವಧಿ ಉಪವಾಸ ಸತ್ಯಾಗೃಹದಲ್ಲಿ ಪಾಲ್ಗೊಂಡಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಭೂ ಸ್ವಾಧೀನ ಕಾಯ್ದೆ 1894 ನ್ನು ಕೂಡಲೇ ರದ್ದುಗೊಳಿಸಬೇಕು. ಒತ್ತಾಯಪೂರ್ವಕವಾಗಿ ರೈತರ ಭೂಮಿಯನ್ನು ವಶಪಡಿಸಿಕೊಳ್ಳುವ ಕೇಂದ್ರ ಸರಕಾರದ ನಿರ್ಧಾರದ ವಿರುದ್ಧ ನಿರಂತರವಾಗಿ ಹೋರಾಟ ಮಾಡಲು ಸಿದ್ದ ಎಂದು ಘೋಷಿಸಿದರು.

ಒಂದು ವೇಳೆ ರೈತರು ತಾವಾಗಿ ಭೂಮಿಯನ್ನು ಕೈಗಾರಿಕೆಗಳಿಗೆ ನೀಡಲು ಮುಂದೆ ಬಂದಲ್ಲಿ ಅಂತ ಸಂದರ್ಭದಲ್ಲಿ ಸಂಧಾನಕ್ಕೆ ಸಿದ್ದ ಎಂದರು.

ಆಮ್ ಆದ್ಮಿ ಪಕ್ಷದ ರೈತರ ರ್ಯಾಲಿಯಲ್ಲಿ ರೈತ ಸಾವನ್ನಪ್ಪಿರುವುದು ದುರದೃಷ್ಟಕರ ಸಂಗತಿ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ