ವ್ಯಾಪಂ ಹಗರಣ: ಮುಂದುವರೆದ ವಿಚಿತ್ರ ಸಾವಿನ ಸರಣಿ

ಸೋಮವಾರ, 29 ಜೂನ್ 2015 (11:12 IST)
ದೇಶದಾದ್ಯಂತ ಸಂಚಲನ ಸೃಷ್ಟಿಸಿರುವ ಮಧ್ಯಪ್ರದೇಶದಲ್ಲಿ ನಡೆದ ವ್ಯಾಪಂ ಹಗರಣದ ಮತ್ತಿಬ್ಬರು ಆರೋಪಿಗಳು   ವಿಚಿತ್ರವಾಗಿ ಮೃತ ಪಟ್ಟಿದ್ದಾರೆ. ಈ ಮೂಲಕ ಪ್ರಕರಣದ ಆರೋಪಿಗಳು ಮತ್ತು ಸಾಕ್ಷಿಗಳ ಅನುಮಾನಾಸ್ಪದ ಸಾವಿನ ಸಂಖ್ಯೆ 25ಕ್ಕೇರಿದೆ. 

 
ಇಂದೋರ್‌ನ ಜೈಲಿನಲ್ಲಿ ಬಂಧಿಯಾಗಿದ್ದ ಪಶುವೈದ್ಯ ನರೇಂದ್ರ ಸಿಂಗ್ ತೋಮರ್ (29) ಶನಿವಾರ ರಾತ್ರಿ ಮತ್ತು  ಜಾಮೀನಿನ ಮೇಲೆ ಹೊರಗಿರುವ ರಾಜೇಂದ್ರ (40) ಗ್ವಾಲಿಯರ್ ಆಸ್ಪತ್ರೆಯಲ್ಲಿ ರವಿವಾರ ಸಾವನ್ನಪ್ಪಿದ್ದಾರೆ. 
 
ರಾಜೇಂದ್ರ ಲಿವರ್ ಸೋಂಕಿನಿಂದ ಬಳಲುತ್ತಿದ್ದರು. ಶನಿವಾರ ರಾತ್ರಿ ಎದೆ ನೋವು ಎಂದು ಹೇಳಿದ ತೋಮರ್ ಅವರನ್ನು ಮಹಾರಾಜಾ ಯಶವಂತ್ ರಾವ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರಾಗಲೇ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಘೋಷಿಸಿದರು.
 
ಈ ಕುರಿತು ಪ್ರತಿಕ್ರಿಯಿಸಿರುವ ಪೇದೆ ದಿನೇಶ್ ಯಾದವ್, "ಅವರು ಎದೆ ನೋವು ಎಂದು ಹೇಳಿದ್ದರಿಂದ ಆಸ್ಪತ್ರೆಗೆ ಕರೆದೊಯ್ದೆವು. ಅವರ ಹೇಗೆ ಸಾವನ್ನಪ್ಪಿದರು ಎಂದು ನಮಗೆ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ. ಅವರ ಸಾವಿನ ಹಿಂದೆ ಸಂಚು ಅಡಗಿದೆ", ಎಂದು ತೋಮರ್ ಕುಟುಂಬದವರು ದೂರಿದ್ದಾರೆ
 
ಮಧ್ಯಪ್ರದೇಶ ರಾಜ್ಯಪಾಲ ರಾಮ್ ನರೇಶ್ ಯಾದವ್ ಪುತ್ರ ಶೈಲೇಶ್ ಯಾದವ್ ಸಹ ಕಳೆದ ಮಾರ್ಚ್ ತಿಂಗಳಲ್ಲಿ ತಮ್ಮ ಮನೆಯಲ್ಲಿಯೇ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಅವರದು ಆತ್ಮಹತ್ಯೆ ಎಂದು ಹೇಳಲಾಗುತ್ತಿದೆ. 
 
ಘಟಾನುಘಟಿ ರಾಜಕಾರಣಿಗಳು ಶಾಮೀಲಾಗಿದ್ದಾರೆಂದು ಹೇಳಲಾಗುತ್ತಿರುವ ಈ ಪ್ರಕರಣದಲ್ಲಿ ಈ ಮೊದಲು 23 ಜನರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು ಮತ್ತಿಬ್ಬರು ವೈದ್ಯರು ಆ ಸಾಲಿಗೆ ಸೇರಿದ್ದಾರೆ. 

ವೆಬ್ದುನಿಯಾವನ್ನು ಓದಿ