ಮುಖ್ಯಮಂತ್ರಿಯಾಗುವ ಬಯಕೆ ವ್ಯಕ್ತಪಡಿಸಿದ ಠಾಕ್ರೆ

ಭಾನುವಾರ, 14 ಸೆಪ್ಟಂಬರ್ 2014 (12:35 IST)
ಮುಖ್ಯಮಂತ್ರಿಯಾಗಬೇಕೆನ್ನುವ ತನ್ನ ಬಯಕೆಯನ್ನು ಇದೇ ಮೊದಲ ಬಾರಿ ಸಾರ್ವಜನಿಕವಾಗಿ ಪ್ರಕಟಿಸಿರುವ ಶಿವಸೇನಾ ನಾಯಕ ಉದ್ಧವ್‌ ಠಾಕ್ರೆ, ತನಗೊಂದು ಅವಕಾಶ ನೀಡುವಂತೆ ಮತದಾರರಿಗೆ ಮನವಿ ಮಾಡಿದ್ದಾರಲ್ಲದೆ, ತಮಗೆ ಮತ ನೀಡಿದ್ದಕ್ಕಾಗಿ ಮುಂದೆ ಅವರು ಪಶ್ಚಾತ್ತಾಪ ಪಡಬೇಕಾದ ಸನ್ನಿವೇಶ ಸೃಷ್ಟಿಯಾಗುವುದಿಲ್ಲ ಎಂಬ ಭರವಸೆ ನೀಡಿದ್ದಾರೆ.

ವಿಧಾನಸಭಾ ಚುನಾವಣೆಗೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಮಿತ್ರ ಪಕ್ಷ ಬಿಜೆಪಿಯೊಂದಿಗೆ ಅಸಮಾಧಾನಗೊಂಡಿರುವ ಠಾಕ್ರೆ, ತಮ್ಮ ರಾಜ್ಯದಲ್ಲಿ ಬಿಜೆಪಿ ಮುಂದೆ ಶಿವಸೇನೆಯೇ ಪ್ರಾಬಲ್ಯ ಹೊಂದಿದೆ ಎಂದು ಹೇಳಿಕೊಂಡರಲ್ಲದೇ, ಕೇಸರಿ ಮೈತ್ರಿಕೂಟ ಅಧಿಕಾರಕ್ಕೇರಿದಲ್ಲಿ ಶಿವಸೇನೆಯ 'ಮುಖ'ವೇ ಮುಖ್ಯಮಂತ್ರಿ ಸ್ಥಾನವನ್ನಲಂಕರಿಸಲಿದೆ ಎಂದು ಘೋಷಿಸಿದ್ದಾರೆ.
 
ಖಾಸಗಿ ಸುದ್ದಿ ವಾಹಿನಿಯ ಜತೆಗೆ ಮಾತನಾಡುತ್ತಿದ್ದ ಠಾಕ್ರೆ "ಜನರು ನನಗೊಂದು ಅವಕಾಶ ನೀಡಬೇಕೆಂದು ನನ್ನ ಬಯಕೆ, ಮತ್ತು ನನ್ನನ್ನು ಅಧಿಕಾರಕ್ಕೇರಿಸಿದ್ದಲ್ಲಿ ಅವರು ದೂರುವಂತ ಅವಕಾಶವೇ ಬರಲಾರದು" ಎಂದು ಆಶ್ವಾಸನೆ  ನೀಡಿದ್ದಾರೆ.
 
ತಾನು ಮುಖ್ಯಮಂತ್ರಿ ಹುದ್ದೆಯ ಕನಸು ಕಾಣುತ್ತಿಲ್ಲವಾದರೂ ಆ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಕ್ಕೆ ಹಿಂಜರಿಯಲಾರೆನೆಂದು ಶಿವಸೇನಾ ವರಿಷ್ಠ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ