ಕೇಂದ್ರದ ಬುಲೆಟ್ ರೈಲು ಯೋಜನೆಗೆ ಉಚಿತ ಭೂಮಿ: ಸಿಎಂ ಅಖಿಲೇಶ್ ಯಾದವ್

ಬುಧವಾರ, 24 ಫೆಬ್ರವರಿ 2016 (17:13 IST)
ಒಂದು ವೇಳೆ, ಕೇಂದ್ರ ಸರಕಾರ ಲಕ್ನೋ ಆಗ್ರಾ ಗ್ರೀನ್ ಫೀಲ್ಡ್ ಎಕ್ಸ್‌ಪ್ರೆಸ್ ವೇ ಹೆದ್ದಾರಿಯಲ್ಲಿ ಬುಲೆಟ್ ರೈಲು ಯೋಜನೆ ಸ್ಥಾಪಿಸಲು ಬಯಸಿದಲ್ಲಿ, ಉಚಿತವಾಗಿ ಭೂಮಿ ನೀಡಲು ಸಿದ್ದ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಘೋಷಿಸಿದ್ದಾರೆ.
 
ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಗೆ ಪತ್ರ ಬರೆದ ಸಿಎಂ ಅಖಿಲೇಶ್, ಉತ್ತರಪ್ರದೇಶ ಸರಕಾರ ತನ್ನದೇ ಆದ ಸಂಪನ್ಮೂಲಗಳಿಂದ ದೇಶದಲ್ಲಿಯೇ ಆಗ್ರಾ ಮತ್ತು ಲಕ್ನೋ ಮಧ್ಯ ಅತಿ ಉದ್ದದ ಎಕ್ಸ್‌ಪ್ರೆಸ್ ವೇ ನಿರ್ಮಿಸುತ್ತಿದೆ. ಒಂದು ವೇಳೆ, ಕೇಂದ್ರ ಸರಕಾರ ಹೆದ್ದಾರಿಯ ಪಕ್ಕದಲ್ಲಿ ಬುಲೆಟ್ ರೈಲು ಯೋಜನೆ ಜಾರಿಗೊಳಿಸಲು ಇಚ್ಚಿಸಿದಲ್ಲಿ ಉಚಿತ ಭೂಮಿ ನೀಡುವುದಾಗಿ ತಿಳಿಸಿದ್ದಾರೆ.  
 
ನಾಳೆ ಮಂಡಿಸಲಿರುವ ರೈಲ್ವೆ ಬಜೆಟ್‌ನಲ್ಲಿ ಎಟವಾ ಬ್ರಾಡ್‌ಗೇಜ್ ಮತ್ತು ಇತರ ರೈಲ್ವೆ ಯೋಜನೆಗಳನ್ನು ತ್ವರಿತಗತಿಯಲ್ಲಿ ಮುಕ್ತಾಯಗೊಳಿಸಲು ಆರ್ಥಿಕ ನೆರವು ಮೀಸಲಿಡಿ ಎಂದು ಸಿಎಂ ಅಖಿಲೇಶ್ ಸಚಿವ ಪ್ರಭು ಅವರಿಗೆ ಕೋರಿದ್ದಾರೆ.
 
ಕನೌಜ್-ಕಾನ್ಪುರ್ ರೈಲು ವಿಭಾಗದಲ್ಲಿ ಪ್ರಸ್ತುತವಿರುವ ಮಂಧಾನಾ ಮತ್ತು ಅನ್ವರ್‌ಗಂಜ್‌ ಸಂಪರ್ಕವನ್ನು ತೆಗೆದುಹಾಕಿ ಮಂಧಾನಾ -ಪಾಂಕಿ ನಗರಗಳಿಗೆ ನೂತನ ರೈಲ್ವೆ ಮಾರ್ಗಕ್ಕಾಗಿ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
 
ರಾಜ್ಯದ ಪ್ರಮುಖ ನಗರಗಳಲ್ಲಿ ರೈಲ್ವೆ ಓವರ್‌ಬ್ರಿಡ್ಜ್‌ಗಳ ನಿರ್ಮಾಣವನ್ನು ತ್ವರಿತಗತಿಯಲ್ಲಿ ತೆಗೆದುಕೊಂಡಲ್ಲಿ ಸಾರಿಗೆ ಸಂಚಾರ ಸುಗಮವಾಗಲಿದೆ ಎಂದು ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಕೇಂದ್ರ ಸಚಿವ ಸುರೇಶ್ ಪ್ರಭು ಅವರಿಗೆ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ