ತಾಯಿ ಮೇಲೆ ಅತ್ಯಾಚಾರ, ಪುಟ್ಟತಮ್ಮನ ಸಾವು: ಎಳೆಎಳೆಯಾಗಿ ಬಿಚ್ಚಿಟ್ಟ 3ವರ್ಷದ ಮಗು

ಶುಕ್ರವಾರ, 11 ಮಾರ್ಚ್ 2016 (14:53 IST)
ಉತ್ತರ ಪ್ರದೇಶದ ಬರೇಲಿಯಲ್ಲಿ ಸೋಮವಾರ ರಾತ್ರಿ ನಡೆದ ಹಸಿ ಬಾಣಂತಿ ಮೇಲಿನ ಅತ್ಯಾಚಾರ ಮತ್ತು ಆಕೆಯ ಹಸುಗೂಸಿನ ದಾರುಣ ಸಾವಿನ ಘೋರ ದೃಶ್ಯಾವಳಿಗಳಿಗೆ ಪ್ರತ್ಯಕ್ಷ ಸಾಕ್ಷಿ ಯಾರು ಗೊತ್ತೆ? ಪೀಡಿತೆಯ 3 ವರ್ಷದ ಮಗು. ತನ್ನ ಅಮ್ಮನ ಮೇಲಿನ ದೌರ್ಜನ್ಯ ಮತ್ತು ಪುಟ್ಟ ತಮ್ಮನ ಸಾವಿನ ಭಯಾನಕತೆಯನ್ನು ಎಳೆ ಎಳೆಯಾಗಿ ಪೊಲೀಸರ ಮುಂದೆ ವಿವರಿಸಿದೆ ಆ ಕಂದಮ್ಮ.
 
ಸೋಮವಾರ ರಾತ್ರಿ ತನ್ನ ಊರಿಗೆ ಹೋಗಲು 3 ವರ್ಷದ ಮತ್ತು 14 ದಿನಗಳ ಪುಟ್ಟ ಮಕ್ಕಳೊಂದಿಗೆ ಬಸ್ ಏರಿದ್ದ ಮಹಿಳೆಯ(28) ಮೇಲೆ ಅದೇ ಬಸ್ ಚಾಲಕ ಮತ್ತು ನಿರ್ವಾಹಕ ಅತ್ಯಾಚಾರವೆಸಗಿದ್ದರು. ಆಕೆಗೆ ಬಲವಂತವಾಗಿ ಮದ್ಯ ಕುಡಿಸಿ ಕೀಚಕತನವನ್ನು ಮೆರೆಯಲಾಗಿತ್ತು. ಘಟನೆ ನಡೆದಾಗ ಅಮಲಿನಲ್ಲಿದ್ದರಿಂದ ಆಕೆಗೇನೂ ನೆನಪಿಲ್ಲ. ಆದರೆ ಆಕೆಯ 3 ವರ್ಷದ ಮಗು ಎಲ್ಲವನ್ನು ಪೊಲೀಸರಿಗೆ ವಿವರಿಸಿದೆ. ಘಟನೆ ನಡೆದಾಗ ಮಗು ಬಸ್‌ನ ಮೂಲೆಯೊಂದರಲ್ಲಿ ಅಡಗಿ ಕುಳಿತಿತ್ತು ಎಂದು ತಿಳಿದು ಬಂದಿದೆ. 
 
ರಾಂಪುರದ ನಿವಾಸಿಯಾಗಿರುವ ಮಹಿಳೆ ಸೋಮವಾರ ರಾತ್ರಿ ಹತ್ತಿರದ ಹಳ್ಳಿಯೊಂದರಲ್ಲಿ ನಡೆದ ಕಾರ್ಯಕ್ರಮವೊಂದನ್ನು ಮುಗಿಸಿ ಮನೆಗೆ ಹೊರಟಿದ್ದಳು. ಆಕೆಯ ಪಕ್ಕದ ಹಳ್ಳಿಯವನಾದ ಬಸ್ ಕಂಡಕ್ಟರ್ ನಿಮ್ಮ ಮನೆ ಬಳಿ ಇಳಿಸುತ್ತೇವೆ ಎಂದು ನಂಬಿಸಿ ಕರೆದುಕೊಂಡು ಹೋಗಿ ಪ್ರಯಾಣಿಕರೆಲ್ಲ ಇಳಿದು ಹೋದ ಮೇಲೆ ಕಿರುಕುಳ ಕೊಡಲು ಆರಂಭಿಸಿದ್ದಾನೆ. 
 
ಆಕೆ ಪ್ರತಿಭಟಿಸಿದಾಗ ಬಲವಂತವಾಗಿ ಮದ್ಯ ಕುಡಿಸಿ ಅತ್ಯಾಚಾರವೆಸಗಿದ್ದಾರೆ. ತಳ್ಳಾಟದಲ್ಲಿ ಮಡಿಲಲ್ಲಿದ್ದ ಆಕೆಯ 14 ದಿನದ ಮಗು ಕೆಳಕ್ಕೆ ಬಿದ್ದು ಮೃತ ಪಟ್ಟಿದೆ. ಬಾಲಕಿ ಪೊಲೀಸರಿಗೆ ನೀಡಿರುವ ಮಾಹಿತ ಪ್ರಕಾರ ಆರೋಪಿಗಳಿಬ್ಬರು ಮಹಿಳೆಯನ್ನು ಬಸ್ ನಿಲ್ದಾಣದ ಬಳಿಯ ರಸ್ತೆ ಬದಿ ಹಾಕಿ ಪರಾರಿಯಾಗಿದ್ದಾರೆ. 3 ವರ್ಷದ ಮಗು ಆ ಸಮಯದಲ್ಲಿ ಬಸ್ ಇಳಿದು ಅಜ್ಞಾತ ಸ್ಥಳಕ್ಕೆ ಹೋಗಿ ಅವಿತು ಕುಳಿತಿದೆ.
 
ಮರುದಿನ ಬೆಳಿಗ್ಗೆ ಮಹಿಳೆ ಮತ್ತು ಮಕ್ಕಳನ್ನು ಹುಡುಕಿಕೊಂಡು ಬಂದ ಗಂಡ ಮತ್ತು ಗ್ರಾಮಸ್ಥರಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತಾಯಿ ಪಕ್ಕ ಸತ್ತ ಮಗು ಮತ್ತು 3 ವರ್ಷದ ಬಾಲೆ ಕಾಣಿಸಿದೆ. 
 
ಪೀಡಿತಳನ್ನು ಆಸ್ಪತ್ರೆಗೆ ಸೇರಿಸಿದ ಆಕೆಯ ಗಂಡ ಪೊಲೀಸರಲ್ಲಿ ದೂರು ಸಲ್ಲಿಸಿದ್ದಾನೆ. ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಪುಟ್ಟ ಮಗು ಎಲ್ಲ ಘಟನಾವಳಿಗಳನ್ನು ವಿವರಿಸಿ ಹೇಳಿದೆ. 
 

ವೆಬ್ದುನಿಯಾವನ್ನು ಓದಿ