ಪಿತ್ರಾರ್ಜಿತ ಆಸ್ತಿಯನ್ನು ಬಡವನಿಗೆ ದಾನ ಮಾಡಿದ ಸಚಿವ

ಶುಕ್ರವಾರ, 3 ಜುಲೈ 2015 (17:24 IST)
ತಮ್ಮ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ಬಡ ವ್ಯಕ್ತಿಯೊಬ್ಬನಿಗೆ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಪೂರ್ವಜರ ಭೂಮಿಯನ್ನು ಹಸ್ತಾಂತರಿಸುವ ಮೂಲಕ ಉತ್ತರ ಪ್ರದೇಶದ ಸಚಿವರೊಬ್ಬರು ಭೂ ಹಗರಣದಲ್ಲಿ ತೊಡಗಿರುವ ತನ್ನ ಸಹೋದ್ಯೋಗಿಗಳಿಗೆ ಮಾದರಿಯಾಗಿದ್ದಾರೆ. 
ವರಿಗಳ ಪ್ರಕಾರ ಬಾರಾಬಂಕಿ ಜಿಲ್ಲೆಯ ನಿವಾಸಿಯಾಗಿರುವ ಬಾಬುಲಾಲ್ ಎಂಬಾತ ಒಂದು ತುಂಡು ಭೂಮಿ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ  ಫರಿದ್ ಕಿದ್ವಾಯಿ ಅವರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದ. 
 
ಬಾಬುಲಾಲ್ ತಾನು ಜಮೀನನ್ನು ಖರೀದಿಸಿದ ದಾಖಲೆಯಾಗಿ ಹಕ್ಕುಪತ್ರವನ್ನು ನ್ಯಾಯಾಲಯದಲ್ಲಿ ಪ್ರಸ್ತುತ ಪಡಿಸಿದ್ದರು. ಸಚಿವರಾದ ಕಿದ್ವಾಯಿ ಸಹ ಭೂಮಿ ತಮಗೆ ಸೇರಿದ್ದು ಎಂಬ ದಾಖಲೆಯನ್ನು ಹಾಜರು ಪಡಿಸಿದ್ದರು. 
 
ಭೂಮಿಯನ್ನು ವಂಚನೆಯಿಂದ ಬಾಬುಲಾಲ್‌ಗೆ ಮಾರಾಟ ಮಾಡಲಾಗಿದೆ ಎಂಬುದು ಕೋರ್ಟ್ ವಿಚಾರಣೆಯಿಂದ ಬಹಿರಂಗವಾಯಿತು. ಬಾಬುಲಾಲ್ ಹೊಂದಿರುವ ದಾಖಲೆಗಳು ನಕಲಿ ಎಂದು ಸಾಬೀತಾಯಿತು. ಬಾಬುಲಾಲ್ ಸಚಿವರ ಮೇಲೆ ಮಾಡಿದ್ದ ಆರೋಪವನ್ನು ಕೋರ್ಟ್ ವಜಾಗಳಿಸಿತು. 
 
ಭೂಮಿ ಕೊಳ್ಳಲು ಮತ್ತು ನಂತರ ಅದು ತನ್ನದೆಂದು ಸಾಬೀತು ಪಡಿಸಲು ಕೋರ್ಟ್‌ಗೆ ಹಣ ಸುರಿದು ಆಘಾತಕ್ಕೀಡಾಗಿದ್ದ ಬಾಬುಲಾಲ್, ಸಚಿವರೇ ಸ್ವತಃ ಆ ಭೂಮಿಯನ್ನು ತನಗೆ ಕೊಡಲು ಬಂದಾಗ ಆವಾಕ್ಕಾಗಿ ಹೋದ. 
 
"ಬಾಬುಲಾಲ್ ಬಹಳ ಬಡವ ಎಂಬುದು ನನ್ನ ಗಮನಕ್ಕೆ ಬಂದಿದೆ. ಆತ ವಂಚನೆಗೊಳಗಾಗಿದ್ದಾನೆ. ನಾನು ಆತನಿಗೆ ಭೂಮಿಯನ್ನು ನೀಡುತ್ತೇನೆ. ನನಗಿಂತಲೂ ಆತನಿಗೆ ಭೂಮಿಯ ಅವಶ್ಯಕತೆ ಹೆಚ್ಚಿದೆ", ಎಂದು ಕಿದ್ವಾಯಿ ಹೇಳಿದ್ದಾರೆ.
 
ಭೂಮಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವುದೆಂದು ಹೇಳಲಾಗುತ್ತಿದೆ. 
 
ಸಚಿವರ ಔದಾರ್ಯಕ್ಕೆ ಕೃತಜ್ಞತೆ ವ್ಯಕ್ತ ಪಡಿಸಿರುವ ಬಾಬುಲಾಲ್, "ಸಚಿವರ ಈ ಉಪಕಾರಕ್ಕೆ ಆಭಾರವನ್ನು ವ್ಯಕ್ತ ಪಡಿಸಲು ನನ್ನಲ್ಲಿ ಶಬ್ಧಗಳಿಲ್ಲ", ಎಂದಿದ್ದಾನೆ. 
 
ವಿಪರ್ಯಾಸವೆಂದರೆ, ಕಿದ್ವಾಯಿ ಅವರ ಹಲವು ಸಚಿವ ಸಹೋದ್ಯೋಗಿಗಳು ಭೂ ಕಬಳಿಕೆ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ