ಮೋದಿ ಕನಸು: ಪ್ರವಾಸಿ ತಾಣ ಸ್ವಚ್ಚತೆಗಾಗಿ ಸ್ವಚ್ಚ ಪರ್ಯಟನ್ ಮೊಬೈಲ್ ಆಪ್ಸ್

ಮಂಗಳವಾರ, 23 ಫೆಬ್ರವರಿ 2016 (16:55 IST)
ಪ್ರವಾಸಿಗರು ಕೆಂಪುಕೋಟೆ, ತಾಜ್ ಮಹಲ್, ಹಂಪಿ ಸೇರಿದಂತೆ ಹಲವಾರು ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ಒಂದು ವೇಳೆ, ಪ್ರವಾಸಿಗರಿಗೆ ಪ್ರವಾಸಿ ತಾಣಗಳಲ್ಲಿ ಅವ್ಯವಸ್ಥೆ ಕಂಡು ಬಂದಲ್ಲಿ ಸರಕಾರಕ್ಕೆ ದೂರು ನೀಡಿದಲ್ಲಿ ಸರಕಾರ ಅವ್ಯವಸ್ಥೆಯನ್ನು ಸರಿಪಡಿಸಲಿದೆ.
 
ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಚ ಭಾರತ ಅಭಿಯಾನಕ್ಕೆ ಹೊಸ ರೂಪ ಕೊಡಲು, ಮೊಬೈಲ್ ಅಪ್ಲಿಕೇಶನ್ಸ್‌ "ಸ್ವಚ್ಛ ಪರ್ಯಟನ್ ಮೊಬೈಲ್ ಆಪ್ಸ್‌"ನ್ನು ಇಂದು ಕೇಂದ್ರ ಸಚಿವ ಮಹೇಶ್ ಶರ್ಮಾ ಉದ್ಘಾಟಿಸಿದ್ದಾರೆ. ಇದೀಗ 25 ಪ್ರವಾಸಿ ತಾಣಗಳಲ್ಲಿ ಸ್ವಚ್ಚ ಪರ್ಯಟನ ಮೊಬೈಲ್ ಆಪ್ಸ್ ಲಭ್ಯವಿದೆ ಎಂದು ಪ್ರವಾಸೋದ್ಯಮ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.  
 
ಯಾವುದೇ ಪ್ರವಾಸಿ ತಾಣದಲ್ಲಿ ತಿಪ್ಪೆಗುಂಡಿಗಳು, ಸ್ವಚ್ಚತೆಯ ಕೊರತೆ ಕಂಡು ಬಂದಲ್ಲಿ ಪ್ರವಾಸಿಗರು ಅಂತಹ ಚಿತ್ರಗಳನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರಿಕರಿಸಿಕೊಂಡು, ಸ್ವಚ್ಚ ಪರ್ಯಟನ ಮೊಬೈಲ್ ಆಪ್ಸ್‌ನಲ್ಲಿ ಅಪ್ಲೋಡ್ ಮಾಡಬಹುದಾಗಿದೆ. ಅಧಿಕಾರಿಗಳು, ಪ್ರವಾಸಿಗರ ದೂರುಗಳನ್ನು ಆಯಾ ಇಲಾಖೆಗೆ ವರ್ಗಾಯಿಸಿ ಕೂಡಲೇ ಕಾರ್ಯಾಚರಣೆ ಕೈಗೊಳ್ಳುವಂತೆ ಆದೇಶಿಸುತ್ತಾರೆ ಎಂದು ತಿಳಿಸಿದ್ದಾರೆ.
 
25 ಪ್ರವಾಸಿ ತಾಣಗಳಲ್ಲಿ ಸ್ವಚ್ಚ ಪರ್ಯಟನ ಮೊಬೈಲ್ ಆಪ್ಸ್ ಲಭ್ಯವಿದ್ದು, ದೂರು ಬಂದ ಒಂದೆರೆಡು ಗಂಟೆಗಳಲ್ಲಿ ಸ್ವಚ್ಚಗೊಳಿಸಲಾಗುತ್ತದೆ ಎಂದು ಕೇಂದ್ರ ಪ್ರವಾಸೋದ್ಯಮ ಖಾತೆ ಸಚಿವ ಮಹೇಶ್ ಶರ್ಮಾ ತಿಳಿಸಿದ್ದಾರೆ.
 
ಒಂದು ವೇಳೆ, ಅಧಿಕಾರಿಗಳು ಸ್ವಚ್ಚತಾ ಕಾರ್ಯ ಕೈಗೊಳ್ಳದಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಮಹೇಶ್ ಶರ್ಮಾ ಎಚ್ಚರಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ