ಮುಸ್ಲಿಂಮುಕ್ತ ಭಾರತ: ಸಾಧ್ವಿ ಪ್ರಾಚಿ ಹೇಳಿಕೆಗೆ ಜಮ್ಮು ಕಾಶ್ಮಿರದಲ್ಲಿ ಕೋಲಾಹಲ

ಗುರುವಾರ, 9 ಜೂನ್ 2016 (16:12 IST)
ವಿಶ್ವಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ ಮುಸ್ಲಿಂ ಮುಕ್ತ ಭಾರತ ನಮ್ಮ ಗುರಿ ಎಂದು ಹೇಳಿಕೆ ನೀಡಿರುವ ಬಗ್ಗೆ ಜಮ್ಮು ಕಾಶ್ಮಿರದ ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಸಿದೆ. 
 
ಮಂಗಳವಾರದಂದು ಸುದ್ದಿಗಾರರೊಂದಿಗೆ ಮಾತನಾಡಿದ್ದ ಪ್ರಾಚಿ, ಕಾಂಗ್ರೆಸ್ ಮುಕ್ತ ಭಾರತ ಈಗಾಗಲೇ ಪೂರ್ಣಗೊಂಡಿದೆ. ಇದೀಗ ಮುಸ್ಲಿಂ ಮುಕ್ತ ಭಾರತ ನಿರ್ಮಾಣ ನಮ್ಮ ಗುರಿ ಎಂದು ಹೇಳಿಕೆ ನೀಡಿದ್ದರು.
 
ನ್ಯಾಷನಲ್ ಕಾನ್ಫರೆನ್ಸ್ ಶಾಸಕ ಶೆಹನಾದ್ ಗನಾಯಿ ಮಾತನಾಡಿ, ಜಮ್ಮು ವಿಧಾನಸಭೆ ಸಾಧ್ವಿ ಪ್ರಾಚಿ ಹೇಳಿಕೆಯನ್ನು ಒಗ್ಗಟ್ಟಿನಿಂದ ಖಂಡಿಸಬೇಕು ಎಂದು ಒತ್ತಾಯಿಸಿದರು. ಗನಾಯಿಯವರ ಹೇಳಿಕೆಗೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಸಂಪೂರ್ಣ ಬೆಂಬಲ ನೀಡಿದವು. 
 
ಜಮ್ಮು ಕಾಶ್ಮಿರ ವಿಧಾನಸಭೆಯಲ್ಲಿ ಕೋಲಾಹಲ ಮುಂದುವರಿದಿರುವಂತೆ ಶಿಕ್ಷಣ ಖಾತೆ ಸಚಿವ ನಯೀಮ್ ಅಖ್ತರ್ ಮಾತನಾಡಿ ಮುಸ್ಲಿಮರಿಲ್ಲದ ಭಾರತ ಅಪೂರ್ಣವಾಗುತ್ತದೆ ಎಂದರು.
 
ಪತ್ರಿಕೆಗಳಲ್ಲಿ ಸಾಧ್ವಿ ಪ್ರಾಚಿ ಹೇಳಿಕೆಗಳು ಪ್ರಕಟವಾಗುತ್ತಿದ್ದು, ಯಾರೇ ಹೇಳಿದ್ದರೂ ತಪ್ಪು. ಮುಸ್ಲಿಮರು ದೇಶದ ಭಾಗವಾಗಿದ್ದಾರೆ. ಮುಸ್ಲಿಮರಿಲ್ಲದ ಭಾರತ ಪೂರ್ಣವಲ್ಲ ಎಂದರು.
 
ದೇಶದಲ್ಲಿ ವಾಸಿಸುವ ಹಿಂದೂಗಳಿಗಿರುವಂತಹ ಹಕ್ಕುಗಳು ಮುಸ್ಲಿಮರಿಗೂ ಕೂಡಾ ಅನ್ವಯವಾಗುತ್ತದೆ. ಆದ್ದರಿಂದ, ದೇಶ ವಿಭಜಿಸುವ ಅಗತ್ಯವಿಲ್ಲ ಎಂದು ಸಚಿವ ನಯೀಮ್ ಅಖ್ತರ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ