ಬರಾಕ್ ಒಬಾಮಾರ ತಾಜ್ ಭೇಟಿ ಕ್ಯಾನ್ಸಲ್?

ಶನಿವಾರ, 24 ಜನವರಿ 2015 (15:35 IST)
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಶನಿವಾರ ಸಂಜೆ ಭಾರತಕ್ಕೆ ಹೊರಡಲಿದ್ದು ನಾಳೆ ಬೆಳಿಗ್ಗೆ 10 ಗಂಟೆಗೆ ನವದೆಹಲಿಗೆ ಬಂದಿಳಿಯಲಿದ್ದಾರೆ.  ಆದರೆ ಅವರ ಭಾರತ ಪ್ರವಾಸದಲ್ಲಿ ನಿಗದಿಯಾಗಿದ್ದ ತಾಜ್‌ಮಹಲ್ ಭೇಟಿ ಕಾರ್ಯಕ್ರಮ ರದ್ದಾಗಲಿದೆ ಎಂದು ಹೇಳಲಾಗುತ್ತಿದೆ. 
 
ಅಮೇರಿಕಾದ ಅಧ್ಯಕ್ಷ ತಮ್ಮ ಪತ್ನಿ ಮಿಚೆಲ್ ಒಬಾಮ ಜತೆ ಜನವರಿ 27 ರಂದು ಆಗ್ರಾಕ್ಕೆ ಭೇಟಿ ನೀಡುವುದೆಂದು ಈ ಮೊದಲು ನಿಗದಿಯಾಗಿತ್ತು. 
 
ಆದರೆ ಭದ್ರತೆಯ ಕಾರಣದಿಂದ ಅವರೀಗ ತಾಜ್ ಭೇಟಿಯನ್ನು ರದ್ದುಗೊಳಿಸಿದ್ದಾರೆ. 27ರ ಬೆಳಿಗ್ಗೆ ಆಹ್ವಾನಿತ ಗಣ್ಯರ ಸಭೆಯಲ್ಲಿ ಮಾತನಾಡಲಿರುವ ಒಬಾಮಾ ದೆಹಲಿಯಿಂದ ನೇರವಾಗಿ ಸೌದಿ ಅರೇಬಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದು ಬಂದಿದೆ.
 
ಒಬಾಮಾ ಭೇಟಿ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ್ ಸರಕಾರ ಆಗ್ರಾದಲ್ಲಿ ಎಲ್ಲ ರೀತಿಯ ಭದ್ರತೆಯ ವ್ಯವಸ್ಥೆಗಳನ್ನು ಮಾಡಿತ್ತು ಮತ್ತು ಮೇಲ್ವಿಚಾರಣೆಗೆ ಅಧಿಕಾರಿಗಳನ್ನು ನೇಮಿಸಿತ್ತು. ಅಮೇರಿಕಾದ ಭದ್ರತಾ ಅಧಿಕಾರಿಗಳು ಸಹ ಈಗಾಗಲೇ ಆಗ್ರಾದಲ್ಲಿ ನೆಲೆಯೂರಿದ್ದಾರೆ. 
 
ದೆಹಲಿಯಿಂದ ಆಗ್ರಾವರೆಗಿನ ರಸ್ತೆ ಜನವರಿ 27ರಂದು ಹೈ ಅಲರ್ಟ್‌ನಲ್ಲಿ ಇಡಲು ಉದ್ದೇಶಿಸಲಾಗಿತ್ತು. ಒಂದು ವೇಳೆ ಒಬಾಮಾ ಆಗ್ರಾಕ್ಕೆ ಭೇಟಿ ನೀಡಿದರೆ ಅವರು ಬಂದು ವಾಪಸ್ಸಾಗುವವರೆಗಿನ ಮೂರು ಗಂಟೆಗಳ ಅವಧಿಯಲ್ಲಿ ತಾಜ್ ಗಂಜ್ ಪ್ರದೇಶದ ಸಮೀಪದ ಜನರ  ಮೊಬೈಲ್ ಫೋನ್ ಸಂಪರ್ಕವನ್ನು ಸಹ ಕಡಿತಗೊಳಿಸಲಾಗುವುದು ಎಂದು ತಿಳಿದು ಬಂದಿದೆ. 
 
ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿಯವರ ಆಹ್ವಾನದ ಮೇರೆಗೆ ಒಬಾಮಾ ಭಾರತಕ್ಕೆ ಬರುತ್ತಿದ್ದಾರೆ. ಭಾರತದ ಗಣರಾಜ್ಯೋತ್ಯವ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿರುವ ಪ್ರಥಮ ಅಮೇರಿಕನ್ ಅಧ್ಯಕ್ಷ ಅವರೆನಿಸಿಕೊಳ್ಳಲಿದ್ದಾರೆ. 

ವೆಬ್ದುನಿಯಾವನ್ನು ಓದಿ