ಉ.ಪ್ರ. ರಾಜ್ಯಪಾಲ ರಾಮನಾಯಕ್ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ: ಸಮಾಜವಾದಿ ಪಕ್ಷ

ಮಂಗಳವಾರ, 28 ಜುಲೈ 2015 (15:29 IST)
ಉತ್ತರಪ್ರದೇಶದಲ್ಲಿ ಪ್ರತಿಯೊಂದು ಮಹತ್ವದ ಹುದ್ದೆಯನ್ನು ಯಾದವ್ ಸಮುದಾಯದವರಿಗೆ ನೀಡಿರುವುದು ಕಳವಳಕಾರಿ ಸಂಗತಿ ಎಂದು ರಾಜ್ಯಪಾಲ ರಾಮ್ ನಾಯಕ್ ನೀಡಿರುವ ಹೇಳಿಕೆಯಿಂದ ಆಕ್ರೋಶಗೊಂಡಿರುವ ಸಮಾಜವಾದಿ ಪಕ್ಷದ ನಾಯಕರು ರಾಮ್ ನಾಯಕ್ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ ಎಂದು ಟೀಕಿಸಿದ್ದಾರೆ.
 
ಮುಂಬರುಲ 2017ರ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಸಮಾಜವಾದಿ ಪಕ್ಷಕ್ಕೆ ಕೆಟ್ಟ ಹೆಸರನ್ನು ತರಲು ರಾಜ್ಯಪಾಲ ರಾಮ್ ನಾಯಕ್ ಕೀಳು ರಾಜಕೀಯದಲ್ಲಿ ತೊಡಗಿದ್ದು ಅವರನ್ನು ಕೂಡಲೇ ರಾಜ್ಯಪಾಲ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಎಸ್‌ಪಿ ನಾಯಕರು ಒತ್ತಾಯಿಸಿದ್ದಾರೆ. 
 
ರಾಜ್ಯಪಾಲ ನಾಯಕ್, ನಿರಂತರವಾಗಿ ಸಮಾಜವಾದಿ ಪಕ್ಷ ಮತ್ತು ಸರಕಾರವನ್ನು ಟೀಕಿಸುತ್ತಾ ಕೀಳು ರಾಜಕೀಯದಲ್ಲಿ ತೊಡಗಿ ರಾಜ್ಯಪಾಲ ಹುದ್ದೆಯ ಘನತೆಗೆ ಕುತ್ತು ತಂದಿದ್ದಾರೆ. ಅವರಿಗೆ ರಾಜ್ಯಪಾಲರ ಎನ್ನುವುದಕ್ಕೆ ನಮಗೆ ನಾಚಿಕೆಯಾಗುತ್ತಿದೆ ಎಂದು ಟೀಕಿಸಿದ್ದಾರೆ.
 
ರಾಜ್ಯದಲ್ಲಿರುವ ಪ್ರತಿಯೊಂದು ಮಹತ್ವದ ಹುದ್ದೆಗೆ ಯಾದವ್ ಸಮುದಾಯದವರನ್ನು ನೇಮಿಸಲಾಗಿದೆ ಎನ್ನುವ ರಾಜ್ಯಪಾಲರ ಆರೋಪಕ್ಕೆ ತಿರುಗೇಟು ನೀಡಿ, ಯಾದವ್ ಸಮುದಾಯದವರನ್ನು ಹೊರತುಪಡಿಸಿ ಇತರ ಸಮುದಾಯಗಳ ವ್ಯಕ್ತಿಗಳು ಮಹತ್ವದ ಹುದ್ದೆಯಲ್ಲಿರುವ ಬಗ್ಗೆ ವಿವರಣಾ ಪಟ್ಟಿಯನ್ನು ನೀಡಿದ್ದಾರೆ. 
 
ರಾಜ್ಯಪಾಲರ ಹೇಳಿಕೆಗಳನ್ನು ನೋಡಿದಲ್ಲಿ ಅವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವುದು ಕಂಡುಬಂದಿದೆ. ಆದ್ದರಿಂದ ರಾಜ್ಯಪಾಲರ ಹುದ್ದೆಯಿಂದ ಅವರನ್ನು ತೆಗೆದುಹಾಕುವಂತೆ ಪ್ರಧಾನಿಯವರಿಗೆ ಪತ್ರ ಬರೆದಿದ್ದೇನೆ ಇಲ್ಲವಾದಲ್ಲಿ ಅವರನ್ನು 2017ರ ವಿಧಾನಸಭೆ ಚುನಾವಣೆಯ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಿಸಿದಲ್ಲಿ ನಮ್ಮ ಸರಕಾರದ ವಿರುದ್ಧ ನಾಚಿಕೆಯಿಲ್ಲದೇ ಟೀಕೆಗಳನ್ನು ಮಾಡಬಹುದು ಎಂದು ಲೇವಡಿ ಮಾಡಿದ್ದಾರೆ. 
 
ಮತ್ತೊಂದು ವರದಿಗಳ ಪ್ರಕಾರ, ಲಕ್ನೋ ನಗರದಲ್ಲಿ 43 ಪೊಲೀಸ್ ಠಾಣೆಗಳಲ್ಲಿ 20 ಪೊಲೀಸ್ ಠಾಣೆಗಳಲ್ಲಿ ಯಾದವ್ ಸಮುದಾಯಕ್ಕೆ ಸೇರಿದ ಇನ್ಸೆಪೆಕ್ಟರ್‌ಗಳಿದ್ದಾರೆ. ರಾಜ್ಯದ ಶೇ.40 ರಷ್ಟು ಠಾಣೆಗಳಲ್ಲಿ 1700 ಪೊಲೀಸ್ ಠಾಣೆಗಳಲ್ಲಿ ಯಾದವ್ ಸಮುದಾಯದವರು ಮುಖ್ಯಸ್ಥರಾಗಿದ್ದಾರೆ ಎಂದು ಬಿಜೆಪಿ ವಕ್ತಾರ ವಿಜಯ್ ಪಾಠಕ್ ತಿಳಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ