ಭಾರತ ರತ್ನ ಪಡೆಯುತ್ತಿರುವುದಕ್ಕೆ ವಾಜಪೇಯಿ ಪ್ರತಿಕ್ರಿಯಿಸಿದ್ದು ಹೇಗೆ?

ಶುಕ್ರವಾರ, 27 ಮಾರ್ಚ್ 2015 (12:45 IST)
ಭಾರತದ ಹೆಮ್ಮೆಯ ಮಾಜಿ ಪ್ರಧಾನಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿಯವರಿಗೆ ಇಂದು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪ್ರಧಾನ ಮಾಡಲಾಗುವುದು. ಅಟಲ್ ಅನಾರೋಗ್ಯ ಪೀಡಿತರಾಗಿರುವುದರಿಂದ ಅವರ ನಿವಾಸಕ್ಕೆ ತೆರಳಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಪ್ರಶಸ್ತಿ ನೀಡಲಿದ್ದಾರೆ. 

ವಾಜಪೇಯಿವರಿಗೆ ಪ್ರಶಸ್ತಿ ನೀಡಲು ಸ್ವತಃ ರಾಷ್ಟ್ರಪತಿ ಮನೆಗೆ ಬರುತ್ತಿದ್ದಾರೆ ಎಂಬುದನ್ನು ಅವರಿಗೆ ತಿಳಿಸಲು ಬಿಜೆಪಿಯ ಹಿರಿಯ ನಾಯಕರೊಬ್ಬರು ಅವರ ಮನೆಗೆ ಹೋಗಿದ್ದರಂತೆ. ಅವರ ಮಾತುಗಳನ್ನು ಕೇಳಿದ ವಾಜಪೇಯಿ ನಗಲು ಇಲ್ಲವಂತೆ. ಹಾಸಿಗೆಯಲ್ಲಿ ಮಲಗಿದ್ದ ಅವರು ತಮ್ಮನ್ನು ಭೇಟಿಯಾಗಲು ಬಂದ ಆ ವ್ಯಕ್ತಿಯನ್ನು ತದೇಕ ಚಿತ್ತದಿಂದ ಬಹಳ ಹೊತ್ತು ನೋಡಿ ಸುಮ್ಮನಾದರಂತೆ. ಹೀಗೆಂದು ರಾಷ್ಟ್ರೀಯ ದಿನಪತ್ರಿಕೆಯೊಂದರಲ್ಲಿ ಸುದ್ದಿ ಪ್ರಕಟವಾಗಿದೆ.
 
ಅವರಿಗೆ ಭಾರತ ರತ್ನ ಘೋಷಣೆಯಾದಾಗ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿಷಯ ಮುಟ್ಟಿಸಿದ್ದರಂತೆ. ಆಗ ಅಜಾತಶತ್ರು ಮುಗುಳ್ನಕ್ಕಿದ್ದರು ಎಂದು ಸಚಿವೆ ತಿಳಿಸಿದ್ದರು. 
 
ಕಳೆದ ಕೆಲ ವರ್ಷಗಳಿಂದ ಕಾಯಿಲೆಗಳಿಂದ ಬಳಲುತ್ತಿರುವ ವಾಜಪೇಯಿ ಹಾಸಿಗೆಯಿಂದ ಮೇಲೇಳುತ್ತಿಲ್ಲ. ದೆಹಲಿಯ ಕೃಷ್ಣ ಮೆನನ್ ಮಾರ್ಗದಲ್ಲಿ ಮಾಜಿ ಪ್ರಧಾನಿ ವಾಜಪೇಯಿ ನಿವಾಸವಿದ್ದು ಅತ್ಯಾಪ್ತರಿಗೆ ಮಾತ್ರ ಅವರ ಭೇಟಿಗೆ ಅವಕಾಶವನ್ನು ನೀಡಲಾಗುತ್ತಿದೆ. 
 
ಈ ಬಾರಿ ಮಾಜಿ ಪ್ರಧಾನಿ ವಾಜಪೇಯಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಮದನ್ ಮೋಹನ್ ಮಾಳವೀಯ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. 
 
ಇಂದು ಸಂಜೆ 5 ಗಂಟೆಗೆ ಅಟಲ್ ನಿವಾಸದಲ್ಲಿ ಪ್ರಶಸ್ತಿ ವಿತರಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಗೃಹ ಸಚಿವರಾದ ರಾಜನಾಥ್ ಸಿಂಗ್  ಸೇರಿದಂತೆ ಕೇಂದ್ರ ಸರಕಾರದ ಎಲ್ಲ ಸಚಿವರು, ಇತರ ಬಿಜೆಪಿ ನಾಯಕರು, ಗಣ್ಯ ವ್ಯಕ್ತಿಗಳು ಈ ಶುಭ ಸಂದರ್ಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಮಾರ್ಚ್ 30 ರಂದು ಮದನ್ ಮೋಹನ್ ಮಾಳವೀಯ ಕುಟುಂಬದ ಸದಸ್ಯರು ರಾಷ್ಟ್ರಪತಿ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ