ಪ್ರೀತಿಸಿದವಳು ದೂರಾದಳೆಂದು ಚರ್ಚ್ ಧ್ವಂಸಗೊಳಿಸಿದ

ಶುಕ್ರವಾರ, 24 ಏಪ್ರಿಲ್ 2015 (12:17 IST)
ಎಪ್ರಿಲ್ 16 ರಂದು ಆಗ್ರಾದಲ್ಲಿ ನಡೆ ಚರ್ಚ್ ಧ್ವಂಸ ಪ್ರಕರಣ ಹೊಸ ತಿರುವನ್ನು ಪಡೆದುಕೊಂಡಿದ್ದು, ಇದು ಕೋಮುವಾದದ ಕಾರಣಕ್ಕಲ್ಲ, ಪ್ರೇಮ ವೈಫಲ್ಯದ ಹತಾಶೆಯಿಂದ ನಡೆಸಲಾದ ದುಷ್ಕೃತ್ಯ ಎಂಬ ವಿಚಿತ್ರ ಸತ್ಯ ಬಯಲಾಗಿದೆ.

ಪ್ರೀತಿಸಿದ ಕ್ರಿಶ್ಚಿಯನ್ ಯುವತಿ ಕೈಕೊಟ್ಟಳು ಎಂಬ ಕಾರಣಕ್ಕೆ ಕೋಪಗೊಂಡು ತಾನು ಚರ್ಚ್‌ನ್ನು ನಾಶಗೊಳಿಸಿರುವುದಾಗಿ ಆರೋಪಿ ಹೇಳಿದ್ದಾನೆ. 
 
ಘಟನೆಯ ಪ್ರಮುಖ ಆರೋಪಿ ಹೈದರ್ ಅಲಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿರುವ ಪೊಲೀಸರ ಬಳಿ ಆತ ತನ್ನ ಕುಕೃತ್ಯದ ಹಿಂದಿನ ಉದ್ದೇಶವನ್ನು ಬಾಯ್ಬಿಟ್ಟಿದ್ದಾನೆ. "ನಾನು ಕ್ರಿಶ್ಚಿಯನ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದೆ. ಆಕೆಯ ಬಳಿ ನನ್ನ ಪ್ರೇಮ ನಿವೇದನೆ ಮಾಡಿಕೊಂಡಿದ್ದೆ. ಅದಕ್ಕೆ ಒಪ್ಪಿದ್ದ ಆಕೆ ನನ್ನನ್ನು ಪ್ರೀತಿಸಲು ಪ್ರಾರಂಭಿಸಿದ್ದಳು. ಆದರೆ ಕೆಲ ದಿನಗಳ ಹಿಂದೆ ಮನೆಯ ಸದಸ್ಯರು ವಿರೋಧಿಸುತ್ತಿದ್ದಾರೆ ಎಂಬ ಕಾರಣಕ್ಕೆ ಆಕೆ ನಾನು ನಿನ್ನ ಜತೆಗಿನ ಪ್ರೇಮವನ್ನು ಮುಂದುವರೆಸಲು ಆಗುವುದಿಲ್ಲವೆಂದು ಖಡಾಖಂಡಿತವಾಗಿ ಹೇಳಿ ಹೊರಟು ಹೋದಳು. ಪ್ರತಿದಿನ ಚರ್ಚ್‌ಗೆ ಬರುತ್ತಿದ್ದ ಆಕೆ, ನನ್ನ ಕಣ್ಣಿಗೆ ಕಾಣಿಸಬಾರದೆಂಬ ಕಾರಣಕ್ಕೆ ಕಳೆದ 15 ದಿನಗಳಿಂದ ಚರ್ಚ್‌ಗೆ ಬರುವುದನ್ನು ನಿಲ್ಲಿಸಿದ್ದಳು. ಇದರಿಂದ ಹತಾಶೆಗೊಳಗಾದ ನಾನು  ಇನ್ಫೆಂಟ್ ಜೀಸಸ್ ಮತ್ತು ತಾಯಿ ಮೇರಿಯ ಮೂರ್ತಿಗಳನ್ನು ಪುಡಿ ಪುಡಿ ಮಾಡಿದೆ", ಎಂದು ಆತ ಹೇಳಿದ್ದಾನೆ. 
 
ಹೈದರನ ಫೋನ್ ಕರೆ ಲೊಕೇಶನ್ ಆಧರಿಸಿ ಆತನನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ.
 
ಆದರೆ ಅಷ್ಟು ಕಡಿಮೆ ಸಮಯದಲ್ಲಿ ಆತನೊಬ್ಬನೇ ಚರ್ಚ್ ವಿಧ್ವಂಸಗೊಳಿಸಲು ಸಾಧ್ಯವಿಲ್ಲವೆಂದಿರುವ ಪೊಲೀಸರು ಆತನ ಜತೆ ಮತ್ತೆ ಕೆಲವರು ಶಾಮೀಲಾಗಿರುವ ಶಂಕೆ ವ್ಯಕ್ತ ಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ