ಸಿಎಂ ಆಗ್ತಾರಾ? ಜೈಲು ಸೇರ್ತಾರಾ?: ಸಂಕಷ್ಟದಲ್ಲಿ ಶಶಿಕಲಾ

ಸೋಮವಾರ, 6 ಫೆಬ್ರವರಿ 2017 (11:44 IST)
ತಮಿಳುನಾಡಿನ ನಿಯೋಜಿತ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಶಶಿಕಲಾ ನಟರಾಜನ್ ಒಂದರ ಹಿಂದೊಂದರಂತೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತಿದ್ದ ಬೆನ್ನಲ್ಲೇ ಅವರ ಪತಿ ನಟರಾಜನ್ ಆಸ್ಪತ್ರೆ ಸೇರಿದ್ದಾರೆ. ಇನ್ನೊಂದೆಡೆ ಅವರು ಎದುರಿಸುತ್ತಿರುವ ಅಕ್ರಮ ಆಸ್ತಿ ಪ್ರಕರಣದ ತೀರ್ಪು ಹೊರಬೀಳಲು ಮುಹೂರ್ತ ನಿಗದಿಯಾಗಿದೆ. 

ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ, ಶಶಿಕಲಾ ಮತ್ತು ಇತರ ಇಬ್ಬರ ಮೇಲಿರುವ ಅಕ್ರಮ ಆಸ್ತಿ ಪ್ರಕರಣದ ತೀರ್ಪು ಮುಂದಿನವಾರ ಹೊರಬೀಳಲಿದೆ. ಒಂದು ವೇಳೆ ಸುಪ್ರೀಂ ಶಶಿಕಲಾ ಅವರನ್ನು ಅಪರಾಧಿ ಎಂದು ಪರಿಗಣಿಸಿದ್ದಲ್ಲಿ ಅವರು ಜೈಲು ಸೇರುವುದು ಖಚಿತ. ಹೀಗಾಗಿ ಶಶಿಕಲಾ ಅವರ ರಾಜಕೀಯ ಮಹಾತ್ವಾಕಾಂಕ್ಷೆಯ ಹಾದಿ ದುರ್ಗಮವಾಗಿರುವುದಂತೂ ಸತ್ಯ. 
 
ವಿರೋಧ ಪಕ್ಷಗಳು ಕೂಡ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಶಶಿಕಲಾ ಅವರನ್ನು ಮುಖ್ಯಮಂತ್ರಿಯಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಎಂದು ಬೊಬ್ಬಿಡುತ್ತಿವೆ.  ಈ ಹಿನ್ನೆಲೆಯಲ್ಲಿ ಮುಂದಿನವಾರ ಸುಪ್ರೀಂಕೋರ್ಟ್ ನೀಡುವ ತೀರ್ಪು ಮಹತ್ವವನ್ನು ಪಡೆದುಕೊಂಡಿದೆ. 
 
ಇನ್ನೊಂದೆಡೆ ಉಚ್ಚಾಟಿತ ಸಂಸದೆ ಶಶಿಕಲಾ ಪುಷ್ಪಾ ಕೂಡ ಶಶಿಕಲಾ ಮುಖ್ಯಮಂತ್ರಿಯಾಗುವುದನ್ನು ತಡೆಯುವಂತೆ ಪ್ರಧಾನಿ ಮೋದಿ ಮೊರೆ ಹೋಗಿದ್ದಾರೆ. 
 
ಶಶಿಕಲಾ ಮೇಲೆ ಹಲವಾರು ಕ್ರಿಮಿನಲ್ ಪ್ರಕರಣಗಳಿದ್ದು, ಅವರು ಮುಖ್ಯಮಂತ್ರಿಯಾದರೆ ಕೋರ್ಟ್ ಆದೇಶ ಉಲ್ಲಂಘನೆಯಾಗುತ್ತದೆ. ಅವರು ಗದ್ದುಗೆ ಏರಿದರೆ ರಾಜಕೀಯ ವ್ಯವಸ್ಥೆಗೆ ಕೆಟ್ಟ ಹೆಸರು ತರುತ್ತಾರೆ. ಕಾನೂನು ಸುವ್ಯವಸ್ಥೆಗೂ ಧಕ್ಕೆಯುಂಟಾಗುತ್ತದೆ, ಎಂದು ಶಶಿಕಲಾ ಪುಷ್ಪಾ ಪ್ರಧಾನಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ