ವ್ಯಾಪಂ ಹಗರಣ: ನಿಗೂಢವಾಗಿ ಸಾವನ್ನಪ್ಪಿದ ಪತ್ರಕರ್ತನ ಅಂತ್ಯಸಂಸ್ಕಾರ

ಭಾನುವಾರ, 5 ಜುಲೈ 2015 (15:18 IST)
ವ್ಯಾಪಂ ಹಗರಣದ ತನಿಖೆ ನಡೆಸಲು ಹೋಗಿದ್ದ ಸಂದರ್ಭದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪತ್ರಕರ್ತ ಅಕ್ಷಯ ಸಿಂಗ್ ಅವರ ಅಂತ್ಯಸಂಸ್ಕಾರ ಇಂದು ನವದೆಹಲಿಯಲ್ಲಿ ನಡೆಯಿತು. 

ರಾಷ್ಟ್ರ ರಾಜಧಾನಿಯ ನಿಗಮ್ ಭೋದ್ ಘಾಟ್‌ನಲ್ಲಿ ಸಿಂಗ್ ಅಂತ್ಯಸಂಸ್ಕಾರವನ್ನು ನಡೆಸಲಾಯಿತು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪಮುಖ್ಯಮಂತ್ರಿ ಸಿಸೋಡಿಯಾ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಅಂತ್ಯಕ್ರಿಯೆ ಸಂದರ್ಭದಲ್ಲಿ ಉಪಸ್ಥಿತರಿದ್ದರು. 
 
ಅಕ್ಷಯ ಸಿಂಗ್ ಮನೆಗೆ ತೆರಳಿ ರಾಹುಲ್ ಗಾಂಧಿ ಸಾಂತ್ವನ ನೀಡಿದ್ದಾರೆ. 
 
ಮಧ್ಯಪ್ರದೇಶ ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ವ್ಯಾಪಂ ಹಗರಣದ ತನಿಖೆಯಲ್ಲಿ ತೊಡಗಿದ್ದ  ಸಿಂಗ್ ಟುಡೇ ಗ್ರೂಪ್‌ಗಾಗಿ ಕಾರ್ಯನಿರ್ವಹಿಸುತ್ತಿದ್ದರು.
 
ವ್ಯಾಪಂ ಹಗರಣದ ಸಾವನ್ನಪ್ಪಿದ ಆರೋಪಿಯ ಮನೆಯವರನ್ನು ಸಂದರ್ಶನ ಮಾಡಲು ತೆರಳಿದ್ದ ವೇಳೆ ಏಕಾಏಕಿ ಅವರ ಬಾಯಿಂದ ನೊರೆ ಬರಹತ್ತಿತ್ತು. ಅಸ್ವಸ್ಥರಾದ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಸಾವನ್ನಪ್ಪಿದ್ದರು.

ವ್ಯಾಪಂ ಹಗರಣಕ್ಕೆ ಸಂಬಂಧಿಸಿದ ಆರೋಪಿಗಳು, ಸಾಕ್ಷಿಗಳು, ತನಿಖೆ ನಡೆಸುತ್ತಿದ್ದ ಅಕ್ಷಯ್ ಸಿಂಗ್ ಸೇರಿದಂತೆ ಈವರೆಗೆ 46 ಜನರು ನಿಗೂಢವಾಗಿ ಸಾವನ್ನಪ್ಪಿದ್ದಾರೆ.
 
ಅವರ ನಿಗೂಢ ಸಾವಿನ ಪ್ರಕರಣವನ್ನು ಎಸ್‌‌ಐಟಿ ತನಿಖೆಗೆ ವಹಿಸಲಾಗುವುದು ಎಂದು ಸಿಎಂ ಶಿವರಾಜ್‌‌ ಸಿಂಗ್‌‌‌ ಚೌವ್ಹಾಣ್‌‌ ಭರವಸೆ ನೀಡಿದ್ದಾರೆ.
 
ಆದರೆ ಪ್ರಕರಣದ ತನಿಕೆಯನ್ನು ಸಿಬಿಐಗೆ ಒಪ್ಪಿಸಬೇಕು ಮತ್ತು ಪ್ರಧಾನಿ ನರೇಂದ್ರ ಮೋದಿ ಈ ಹಗರಣದ ಕುರಿತು ಮೌನ ಮುರಿಯಬೇಕು ಎಂದು ಕಾಂಗ್ರೆಸ್  ಒತ್ತಾಯಿಸಿದೆ.

ವೆಬ್ದುನಿಯಾವನ್ನು ಓದಿ