ವ್ಯಾಪಂಗೆ 47 ನೇ ಬಲಿ: ಮೂರು ದಿನದಲ್ಲಿ ಮೂರು ಸಾವು

ಸೋಮವಾರ, 6 ಜುಲೈ 2015 (10:41 IST)
ವ್ಯಾಪಂ ಹಗರಣಕ್ಕೆ ಇಂದು ಮತ್ತೊಂದು ಬಲಿಯಾಗಿದೆ. ಕಳೆದ ಮೂರು ದಿನಗಳಲ್ಲಿ ದಿನಕೊಬ್ಬರಂತೆ ಮೂವರು ಅನುಮಾನಾಸ್ಪದವಾಗಿ ಮೃತ ಪಟ್ಟಿದ್ದು ಹಗರಣಕ್ಕೆ ಸಂಬಂಧಿಸಿದವರ ಸರಣಿ ಸಾವಿನ ಸಂಖ್ಯೆ ಈಗ 47ಕ್ಕೆ ಏರಿದೆ. ಈ ರೀತಿಯಲ್ಲಿ ಒಬ್ಬರ ನಂತರ ಒಬ್ಬರು ಸಾವನ್ನಪ್ಪುತ್ತಿರುವುದು ರಾಜ್ಯಾದ್ಯಂತ ಆತಂಕವನ್ನು ಹುಟ್ಟು ಹಾಕಿದೆ.
 
ಮಧ್ಯಪ್ರದೇಶದ ಸಾಗರ್ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ 'ಅನಾಮಿಕ ಖುಶ್ವಾಹ' ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 
 
ಕಳೆದ ಫೆಬ್ರವರಿಯಲ್ಲಿ ವ್ಯಾಪಮ್ ಮೂಲಕ ಅವರು ಎಸ್ಐ ಆಗಿ ಆಯ್ಕೆಯಾಗಿದ್ದರು. 
 
ನಿನ್ನೆಯಷ್ಟೇ ಎನ್‌ಎಸ್ ಕಾಲೇಜು ಡೀನ್ ಅರುಣ್ ಶರ್ಮಾ ದೆಹಲಿಯ ಹೊಟೆಲ್ ಒಂದರಲ್ಲಿ  ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದರು. 
 
ಶನಿವಾರ ಹಗರಣದ ತನಿಖೆಗೆ ಹೋಗಿದ್ದ ಖಾಸಗಿ ಚಾನೆಲ್ ಒಂದರ ಪತ್ರಕರ್ತ ಅಕ್ಷಯ್ ಸಿಂಗ್ ಸಹ ಏಕಾಏಕಿ ಅಸ್ವಸ್ಥರಾಗಿ ಸಾವನ್ನಪ್ಪಿದ್ದರು. 
 
ಮಧ್ಯಪ್ರದೇಶ್ ರಾಜ್ಯಪಾಲ ರಾಮನರೇಶ್ ಯಾದವ್ ಪುತ್ರ ಶೈಲೇಶ್ ಯಾದವ್ (50) ಮಾರ್ಚ್ 25 ರಂದು ತಮ್ಮ ನಿವಾಸದಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಅವರು ಕೂಡ ವ್ಯಾಪಂ ಹಗರಣದ ಆರೋಪಿಯಾಗಿದ್ದಾರೆ. 
 
ವ್ಯಾಪಂ ಹಗರಣದಲ್ಲಿ ಭಾಗಿಯಾಗಿರುವವರ ನಿಗೂಢ ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿರುವುದು ತೀವ ಕಳವಳವನ್ನು ಹುಟ್ಟಿ ಹಾಕಿದೆ.
 
ಇಲ್ಲಿಯವರೆಗೆ ಹಗರಣಕ್ಕೆ ಸಂಬಂಧಿಸಿದಂತೆ 47 ಜನರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಅವರಲ್ಲಿ ಹೆಚ್ಚಿನವರು ಮನೆ, ಲಾಡ್ಜ್, ಹೊಟೆಲ್, ರೈಲು ಹಳಿಗಳ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ. ಕೆಲವು ಹೃದಯಾಘಾತದಿದ ಕೊನೆಯುಸಿರೆಳೆದಿದ್ದಾರೆ. 11 ಜನರು ರಸ್ತೆ ಅಪಘಾತದಲ್ಲಿ ಮರಣವನ್ನಪ್ಪಿದ್ದು ಈ ಸಾವುಗಳು ಕಾಕತಾಳೀಯವಲ್ಲ ಬದಲಾಗಿ ವ್ಯವಸ್ಥಿತ ಷಡ್ಯಂತ್ರ ಎಂಬ ಅನುಮಾನವನ್ನು ಬಲವಡಿಸಿದೆ. ಅಕ್ಷಯಸಿಂಗ್ ಹೊರತು ಪಡಿಸಿ ಮೃತ ಪಟ್ಟ ಉಳಿದವರೆಲ್ಲರೂ ಪ್ರಕರಣದ ಆರೋಪಿಗಳಾಗಿದ್ದಾರೆ. 
 
ಮುಖ್ಯಮಂತ್ರಿ, ಶಿವರಾಜ್ ಸಿಂಗ್ ಚೌಹಾಣ್, ಅವರ ಸಂಬಂಧಿಗಳು ರಾಜ್ಯಪಾಲ ರಾಮ ನರೇಶ್ ಯಾದವ್ ಮತ್ತು ಹಲವು ಪ್ರಭಾವಿ ರಾಜಕಾರಣಿಗಳು ಈ ಹಗರಣದಲ್ಲಿ ಶಾಮೀಲಾಗಿದ್ದಾರೆಂದು ಹೇಳಲಾಗುತ್ತಿದೆ.
 
ಈ ಸರಣಿ ಸಾವುಗಳ ಹಿಂದೆ ಪ್ರಭಾವಿಗಳ ಕೈವಾಡವಿರುವ ಶಂಕೆ ವ್ಯಾಪಕವಾಗಿ ವ್ಯಕ್ತವಾಗುತ್ತಿದೆ. ಈ ಹಗರಣ ಹಲವು ಘಟಾನುಘಟಿಗಳ ಬಣ್ಣವನ್ನು ಬಯಲು ಮಾಡುವ ಸಾಧ್ಯತೆ ಇರುವುದರಿಂದ ವ್ಯವಸ್ಥಿತವಾಗಿ ಕೊಲೆಗೈದು ಸಾಕ್ಷ್ಯನಾಶ ಮಾಡಲಾಗುತ್ತಿದೆ ಎಂಬ ಅನುಮಾನಗಳು ಹುಟ್ಟಿಕೊಂಡಿದೆ. 
 
ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 2000 ಮಂದಿ ಈಗಾಗಲೇ ಜೈಲಿನಲ್ಲಿದ್ದು, ಮತ್ತೂ ಸಾವಿರಾರು ಮಂದಿ ಜೈಲಿನ ಹೊರಗಿದ್ದಾರೆ. 
 
ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. 
 
ಈಗಲಾದರೂ ವ್ಯಾಪಂ ಹಗರಣದ ತನಿಖೆಯನ್ನು ಸಿಬಿಐಗೆ ವಬಿಸಬೇಕೆಂದು ವಿರೋಧ ಪಕ್ಷ ಕಾಂಗ್ರೆಸ್ ಸರಕಾರವನ್ನು ಒತ್ತಾಯಿಸಿದೆ. 

ವೆಬ್ದುನಿಯಾವನ್ನು ಓದಿ