ಡಿಎಂಕೆ ಮತ್ತು ಎಐಎಡಿಎಂಕೆ ಕಾರ್ಯಕರ್ತರ ಘರ್ಷಣೆ:ಹಲವರ ಬಂಧನ

ಭಾನುವಾರ, 28 ಸೆಪ್ಟಂಬರ್ 2014 (17:37 IST)
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರಿಗೆ ಶಿಕ್ಷೆಯಾದ ಹಿನ್ನೆಲೆಯಲ್ಲಿ  ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷದ ಕಾರ್ಯಕರ್ತರ ನಡುವೆ ಉಂಟಾದ ಘರ್ಷಣೆಗೆ ಸಂಬಂಧಿಸಿದಂತೆ ಡಿಎಂಕೆ ಪಕ್ಷ ವರಿಷ್ಠ ಎಂ.ಕರುಣಾನಿಧಿ ಹಾಗೂ ಪಕ್ಷದ ಖಜಾಂಚಿ ಎಂ.ಕೆ.ಸ್ಟಾಲಿನ್ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
 
ಗೋಪಾಲಪುರಂದಲ್ಲಿರುವ ಕರುಣಾನಿಧಿ ನಿವಾಸ ಬಳಿ ಡಿಎಂಕೆ ಕಾರ್ಯಕರ್ತರು ಮಾರಕಾಸ್ತ್ರಗಳೊಂದಿಗೆ ತಮ್ಮ ಮೇಲೆ ದಾಳಿ ನಡೆಸಿದರು ಎಂದು ಆರೋಪಿಸಿ ಎಐಎಡಿಎಂಕೆ ಕಾರ್ಯಕರ್ತರು ನೀಡಿದ ದೂರಿನಡಿ ರೊಯಪೆಟ್ಟಾ ಪೊಲೀಸ್‌ ಠಾಣೆಯಲ್ಲಿ ಕರುಣಾನಿಧಿ ಹಾಗೂ ಸ್ಟಾಲಿನ್‌ ಸೇರಿದಂತೆ ಇತರ ಹಲವರ ವಿರುದ್ಧ ಶನಿವಾರ ಮೂರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಭಾರತೀಯ ದಂಡ ಸಂಹಿತೆಯ ಕಲಂ 147, 148, 324, 336 ಹಾಗೂ 506/2ರ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
 
ಜಯಲಲಿತಾ ಅವರು ಜೈಲು ಸೇರಲು ಡಿಎಂಕೆ ನಾಯಕರೆ ಕಾರಣ ಎಂದು ಆರೋಪಿಸಿ ಎಐಎಡಿಎಂಕೆ ಕಾರ್ಯಕರ್ತರು ಪ್ರತಿಭಟನೆಗಿಳಿದಾಗ ಘರ್ಷಣೆ ಉಂಟಾಗಿತ್ತು.

ವೆಬ್ದುನಿಯಾವನ್ನು ಓದಿ