ಮಿಗ್ 27 ಯುದ್ಧ ವಿಮಾನ ಪತನ: ಇಬ್ಬರೂ ಪೈಲಟ್ ಸೇಫ್

ಮಂಗಳವಾರ, 27 ಜನವರಿ 2015 (18:10 IST)
ಭಾರತೀಯ ವಾಯುಪಡೆಗೆ ಸೇರಿದ ಮಿಗ್ 27 ಎಂಬ ಹೆಸರಿನ ಲಘು ಯುದ್ಧ ವಿಮಾನವೋಂದು ರಾಜಸ್ತಾನದಲ್ಲಿ ಪತನವಾಗಿದ್ದು, ಅದೃಷ್ಟವಶಾತ್ ವಿಮಾನದಲ್ಲಿದ್ದ ಇಬ್ಬರೂ ಪೈಲಟ್‌ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
 
ಈ ಘಟನೆಯು ರಾಜ್ಯದ ಬಾರ್ಮರ್‌ ಎಂಬಲ್ಲಿ ಸಂಭವಿಸಿದ್ದು, ಪೈಲಟ್‌ ನಿಯಂತ್ರಣ ಕಳೆದುಕೊಂಡ ವಿಮಾನ ನೇರವಾಗಿ ಬೈಕ್ ಸವಾರನ ಮೇಲೆ ಬಿದ್ದಿದೆ. ಬೈಕ್ ಸವಾರನಿಗೆ ಸಣ್ಣಪುಟ್ಟ ತರಚು ಗಾಯಗಳು ಮತ್ತು ಸುಟ್ಟ ಗಾಯಗಳಾಗಿವೆ. ಪ್ರಸ್ತುತ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. 
 
ಬಾರ್ಮರ್‌ನ  ನಿವಾಸಿದಾಯ ಲೂನ್ ಸಿಂಗ್ ಎಂಬಾತ ತನ್ನ ಮದುವೆಯ ಆಮಂತ್ರಣ ಪತ್ರಿಕೆಯನ್ನು ಹಂಚುವ ಸಲುವಾಗಿ ಬೈಕ್‌ನಲ್ಲಿ ತೆರಳುತ್ತಿದ್ದ. ಈ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಆಶ್ಚರ್ಯಕರ ರೀತಿಯಲ್ಲಿ ಲೂನ್ ಸಿಂಗ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ. 
 
ಜೋಧ್‌ಪುರದ ಸೇನಾ ಕ್ಯಾಂಪ್‌ನಿಂದ ಹೊರಟಿದ್ದ ಈ ಮಿಗ್ 27, ಉತ್ತರಲೈನತ್ತ ಪ್ರಯಾಣ ಆರಂಭಿಸಿತ್ತು.
ಮಾರ್ಗ ಮಧ್ಯೆ ವಿಮಾನದಲ್ಲಿ ತಾಂತ್ರಿಕ ದೋಷಗಳು ಕಂಡು ಬಂದ ಹಿನ್ನಲೆಯಲ್ಲಿ ವಿಮಾನವು ಪತನವಾಗುವ ವಿಚಾರ ತಿಳಿದ ಇಬ್ಬರು ಪೈಲಟ್‌ಗಳು ವಿಮಾನ ಪತನವಾಗುವ ಮುನ್ನವೇ ಹೊರಗೆ ಜಿಗಿದಿದ್ದಾರೆ. ಅಲ್ಲದೆ ವಿಮಾನ ಪತನವಾದ ಸ್ಥಳದಿಂದ ಸುಮಾರು 4 ಕಿ.ಮೀ ದೂರದಲ್ಲಿ ಪೈಲಟ್‌ಗಳು ಪಾರಾಚ್ಯೂಟ್‌ ಸಹಾಯದಿಂದ ಸುರಕ್ಷಿತವಾಗಿ ಭೂಮಿಗೆ ಇಳಿದಿದ್ದಾರೆ. ಘಟನಾ ಸ್ಥಳಕ್ಕೆ ವಾಯು ಸೇನಾ ಅಧಿಕಾರಿಗಳು ದೌಡಾಯಿಸಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
 
ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ವಾಯುಸೇನಾ ಅಧಿಕಾರಿಗಳು, ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಿದ್ದಾರೆ. ಈಗಾಗಲೇ ವಿಮಾನದ ಇಬ್ಬರು ಪೈಲಟ್‌ಗಳ ವಿಚಾರಣೆಗೆ ಐಎಎಫ್ ಮುಂದಾಗಿದೆ ಎಂದು ತಿಳಿದುಬಂದಿದೆ. 

ವೆಬ್ದುನಿಯಾವನ್ನು ಓದಿ