ತಮಿಳುನಾಡು ಚುನಾವಣೆ: ಕಾಂಗ್ರೆಸ್- ಡಿಎಂಕೆ ಮೈತ್ರಿ, ಎಐಡಿಎಂಕೆಗೆ ಸವಾಲು

ಶನಿವಾರ, 13 ಫೆಬ್ರವರಿ 2016 (16:52 IST)
ಮತ್ತೆ ಅಧಿಕಾರವನ್ನು ಗಿಟ್ಟಿಸಬೇಕೆಂಬ ಜಯಲಲಿತಾ ನೇತೃತ್ವದ ಎಐಡಿಎಂಕೆ ಪಕ್ಷದ ಮಹಾಭಿಲಾಷೆಗೆ ತಡೆಯೊಡ್ಡುವ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಜತೆಯಾಗಿ ಕಣಕ್ಕಿಳಿಯುವ ನಿರ್ಧಾರವನ್ನು ಕೈಗೊಂಡಿವೆ. 

ರಾಜ್ಯಸಭಾ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ನೇತೃತ್ವದ ನಿಯೋಗ ಶನಿವಾರ ಡಿಎಂಕೆ ಅಧ್ಯಕ್ಷ ಎಮ್. ಕರುಣಾನಿಧಿಯವರನ್ನು ಅವರ ನಿವಾಸದಲ್ಲಿ ಭೇಟಿಯಾದ ಬಳಿಕ ಮೈತ್ರಿಯ ಕುರಿತು ಘೋಷಣೆ ಮಾಡಲಾಯಿತು. 
 
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಇ.ವಿ.ಕೆ.ಎಸ್ ಇಳಂಗೋವನ್, ಪಕ್ಷದ ರಾಜ್ಯ ಉಸ್ತುವಾರಿ  ಮುಕುಲ್ ವಾಸ್ನಿಕ್ ಆಜಾದ್ ಜತೆಗೆ ಕರುಣಾನಿಧಿ ನಿವಾಸಕ್ಕೆ ತೆರಳಿದ್ದರು. 
 
ಶ್ರೀಲಂಕನ್ ತಮಿಳಿಯನ್ನರ ಸಮಸ್ಯೆಗೆ ಸಂಬಂಧಿಸಿದಂತೆ ವೈಮನಸ್ಸು ಉಂಟಾಗಿ ಡಿಎಂಕೆ ಈ ಹಿಂದೆ ಕಳೆದ ಮೂರು ವರ್ಷಗಳ ಹಿಂದೆ ಕಾಂಗ್ರೆಸ್ ಜತೆಗಿನ ಮೈತ್ರಿಯನ್ನು ಮುರಿದುಕೊಂಡಿತ್ತುಯ ಈಗ ಮತ್ತೆ ನಾಯಕರಿಬ್ಬರ ಫಲಪ್ರದ ಮಾತುಕತೆ ಮುರಿದ ಮೈತ್ರಿಗೆ ಮತ್ತೆ ಬೆಸುಗೆ ಹಾಕಿದೆ. 
 
ಡಿಎಂಕೆ ನಾಯಕರಾದ ಎಮ್.ಕೆ. ಸ್ಟಾಲಿನ್, ಕನಿಮ್ಹೋಳಿ ಸಹ ಸಭೆಯಲ್ಲಿ ಹಾಜರಿದ್ದರು. 235 ವಿಧಾನಸಭಾ ಕ್ಷೇತ್ರಗಳಿಗೆ ಕಣಕ್ಕಿಳಿಯಲು ಸೀಟು ಹಂಚಿಕೆ ಕುರಿತು ಇನ್ನು ನಿರ್ಧಾರವಾಗಿಲ್ಲ. 
 
ನಾವು ಮತ್ತು ಕರುಣಾನಿಧಿಯವರು ಜತೆಗೆ ಚುನಾವಣೆಯನ್ನು ಎದುರಿಸುತ್ತೇವೆ. ಡಿಎಂಕೆ ಸದಾ ನಮಗೆ ಭರವಸೆಯ ಸಂಗಾತಿಯಾಗಿದೆ. ಡಿಎಂಕೆ ನೇತೃತ್ವದಲ್ಲಿ ತಮಿಳುನಾಡಿನಲ್ಲಿ ಸರ್ಕಾರ ರಚಿಸುವ ವಿಶ್ವಾಸ ನಮಗಿದೆ ಎಂದು ಆಜಾದ್ ಹೇಳಿದ್ದಾರೆ. 
 
ಮೈತ್ರಿಯನ್ನು ಸ್ವಾಗತಿಸಿ ಮಾತನಾಡಿರುವ ಡಿಎಂಕೆ ವಕ್ತಾರ ಮನು ಸುಂದರಮ್, ಡಿಎಂಕೆ ಮತ್ತು ಕಾಂಗ್ರೆಸ್ ಈ ಹಿಂದೆ ಕೂಡ ಮಿತ್ರರಾಗಿದ್ದವು. ಜಯಲಲಿತಾ ಸರ್ಕಾರವನ್ನು ಕಿತ್ತೊಗೆಯುವ ಅಗತ್ಯವಿದೆ. ಹೀಗಾಗಿ ಸಮಾನ ಮನಸ್ಕ ಪಕ್ಷಗಳಿಗೆ ಮೈತ್ರಿಕೂಟದಲ್ಲಿ ಸ್ವಾಗತವಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ