ವಾಷ್ ಔಟ್ ಆದ ಮುಂಗಾರು ಅಧಿವೇಶನ : 8 ಕೋಟಿ ನಷ್ಟ

ಶನಿವಾರ, 25 ಜುಲೈ 2015 (11:24 IST)
ಕೇಂದ್ರ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ನಿಲ್ಲದ ಜಟಾಪಟಿಯಿಂದ ಮುಂಗಾರು ಅಧಿವೇಶನದ ಮೊದಲ ವಾರದ ಕಲಾಪ ಸಂಪೂರ್ಣವಾಗಿ ವ್ಯರ್ಥವಾಗಿದ್ದು ಇದರ ಪರಿಣಾಮ ತೆರಿಗೆದಾರರ 8 ಕೋಟಿ ರೂಪಾಯಿ ಬೆಲೆ ಇಲ್ಲದಂತಾಗಿದೆ. 

ಒಂದು ನಿಮಿಷದ ಕಲಾಪಕ್ಕೆ ಸುಮಾರು 29,000 ರೂಪಾಯಿಗಳು ಖರ್ಚಾಗುತ್ತೆ. ಅಧಿವೇಶನಕ್ಕಾಗಿ ದಿನವೊಂದಕ್ಕೆ ತೆರಲ್ಪಡುವ ವೆಚ್ಚ 2 ಕೋಟಿ. ಆಗಸ್ಟ್ 13ರವರೆಗೆ ಅಂದರೆ  18 ದಿನಗಳ ಕಾಲ ಮುಂಗಾರು ಅಧಿವೇಶನ ನಡೆಯಲಿದ್ದು, ಇದಕ್ಕೆ ಸುಮಾರು 35 ಕೋಟಿ ರೂಪಾಯಿ ವೆಚ್ಚವಾಗುವುದು ಎಂದು ಲೆಕ್ಕ ಹಾಕಲಾಗಿದೆ.  
 
ಮಂಗಳವಾರದಿಂದ ಮುಂಗಾರು ಅಧಿವೇಶನ ಆರಂಭವಾಗಿದ್ದು ಒಂದು ದಿನವೂ ಯಾವುದೇ ವಿಷಯ ಚರ್ಚೆಯಾಗಿಲ್ಲ. ಪ್ರತಿದಿನ ಕಲಾಪ ಕೇವಲ ಗಲಾಟೆ, ವಿರೋಧ ಪ್ರದರ್ಸನ, ಕೋಲಾಹಲಕ್ಕೆ ಆಹುತಿಯಾಗಿದೆ. ಶುಕ್ರವಾರ ಸಹ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳು ತೀವ್ರ ಗದ್ದಲ ಎಬ್ಬಿಸಿದ್ದರಿಂದ ಸ್ಪೀಕರ್ ಸುಮಿತ್ರಾ ಮಹಾಜನ್ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದ್ದರು. ರಾಜ್ಯಸಭೆಯಲ್ಲೂ ವಿರೋಧ ಪ್ರದರ್ಶನ ಮುಂದುವರಿದ ಹಿನ್ನೆಲೆಯಲ್ಲಿ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.
 
ಲಲಿತ್ ಗೇಟ್ ಕಳಂಕ ಹೊತ್ತಿರುವ ಸುಷ್ಮಾ ಸ್ವರಾಜ್, ರಾಜಸ್ಥಾನದ ಮುಖ್ಯಮಂತ್ರಿ ಮತ್ತು ವ್ಯಾಪಂ ಹಗರಣದ ಕಪ್ಪುಚುಕ್ಕಿ ಅಂಟಿಸಿಕೊಂಡಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವವರೆಗೂ ಕಲಾಪ ನಡೆಸಲು ಅವಕಾಶ ನೀಡುವುದಿಲ್ಲವೆಂದು ಕಾಂಗ್ರೆಸ್ ಅಧಿವೇಶನಕ್ಕೂ ಮುನ್ನವೇ ಘೋಷಿಸಿತ್ತು. 

ವೆಬ್ದುನಿಯಾವನ್ನು ಓದಿ