ಪರ-ವಿರೋಧ ಅಭಿಪ್ರಾಯ ಸ್ವೀಕರಿಸಲು ನಾವು ಸಿದ್ಧ: ಮೋದಿ

ಶುಕ್ರವಾರ, 27 ಫೆಬ್ರವರಿ 2015 (14:56 IST)
ಭೂಸ್ವಾಧೀನ ತಿದ್ದುಪಡಿ ಕಾಯಿದೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಲೋಕಸಭೆಯಲ್ಲಿ ಪ್ರತಿಕ್ರಿಯಿಸಿದ್ದು, ವಿರೋಧ ಪಕ್ಷಗಳ ಅಭಿಪ್ರಾಯ ನಮಗೆ ಮುಖ್ಯವಾಗಿದ್ದು, ಪರ-ವಿರೋಧ ಅಭಿಪ್ರಾಯಗಳನ್ನು ಸ್ವೀಕರಿಸಲು ನಾವು ಸಿದ್ಧರಿದ್ದೇವೆ ಎಂದಿದ್ದಾರೆ.
 
ಲೋಕಸಭಾ ಕಲಾಪ ವೇಳೆಯಲ್ಲಿ ಮಾತನಾಡಿದ ಮೋದಿ, ಭೂ ಸ್ವಾದೀನ ಕಾಯಿದೆಗೆ ಸಂಬಂಧಿಸಿದಂತೆ ಸಂಪುಟ ಸಚಿವರೊಂದಿಗೆ ವಿಸ್ತೃತ ಚರ್ಚೆ ನಡೆಸಿದ್ದೇವೆ. ಸರ್ಕಾರವು ರೈತರಿಗೆ ಅನ್ಯಾಯವಾಗುವಂತಹ ಯಾವ ನಿರ್ಧಾರಗಳನ್ನೂ ಕೂಡ ಸುಗ್ರೀವಾಜ್ಞೆಯಲ್ಲಿ ಅಳವಡಿಸಿಲ್ಲ. ಅಲ್ಲದೆ ಕಾಯಿದೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ಅಭಿಪ್ರಾಯ ನಮಗೆ ಮುಖ್ಯವಾಗಿದ್ದು, ಪರ ಅಥವಾ ವಿರೋಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಿ. ಅದನ್ನು ನಾವು ಸ್ವೀಕರಿಸಲಿದ್ದೇವೆ ಎಂದರು. 
 
ಭೂ ಸ್ವಾಧೀನ ಕಾಯಿದೆಗೆ ತಿದ್ದುಪಡಿ ತಂದಿದ್ದ ಕೇಂದ್ರ ಸರ್ಕಾರ, ಕಾಯಿದೆ ಅಡಿಯಲ್ಲಿ ಜ.12ರಂದು ಸುಗ್ರೀವಾಜ್ಞೆಯನ್ನು ಹೊರಡಿಸಿತ್ತು. ಆದರೆ ಈ ಸುಗ್ರೀವಾಜ್ಞೆಯು ರೈತ ವಿರೋಧಿಯಾಗಿದ್ದು, ಸರ್ಕಾರ ನಗರಾಭಿವೃದ್ದಿ ಹೆಸರಿನಲ್ಲಿ ರೈತರ ಭೂಮಿಯನ್ನು ಅಕ್ರಮವಾಗಿ ಕಸಿಯಲು ನೋಡುತ್ತಿದೆ ಎಂದು ಆರೋಪಿಸಿದ್ದ ವಿರೋಧ ಪಕ್ಷಗಳು, ಇದಂೂ ಕೂಡ ಸುಗ್ರೀವಾಜ್ಞೆಯನ್ನು ಹಿಂಪಡೆಯುವಂತೆ ಪಟ್ಟು ಹಿಡಿದಿದ್ದವು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಹೀಗೆ ಪ್ರತಿಕ್ರಿಯಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ