ಸ್ವಿಸ್‌ನಿಂದ ಜೀವಮಾನದಲ್ಲಿ ಕಪ್ಪುಹಣ ತರೋಕೆ ಆಗಲ್ಲ: ಬಿಜೆಪಿ ಎಂಪಿ

ಶುಕ್ರವಾರ, 25 ಜುಲೈ 2014 (12:59 IST)
ಲೋಕಸಭೆಯಲ್ಲಿ ಬಿಜೆಪಿ ಸಂಸತ್ ಸದಸ್ಯರೊಬ್ಬರು ಹಣಕಾಸು ಮಸೂದೆಯ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾ,  ಸ್ವಿಡ್ಜರ್‌ಲ್ಯಾಂಡ್‌ನಿಂದ ನಮ್ಮ ಜೀವಮಾನದಲ್ಲಿ ಕಪ್ಪು ಹಣ ವಾಪಸ್ ತರುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದರಿಂದ ಸರ್ಕಾರಕ್ಕೆ ತೀವ್ರ ಮುಜುಗರದ ಸ್ಥಿತಿ ಉಂಟಾಯಿತು. ಕಪ್ಪು ಹಣವನ್ನು ವಾಪಸ್ ತರುವ ಬದ್ಧತೆಯನ್ನು ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿರುವುದರಿಂದ ಬಿಜೆಪಿ ಎಂಪಿ ನಿಶಿಕಾಂತ್ ದುಬೆ ಹೇಳಿಕೆಯಿಂದ ಬಿಜೆಪಿ ಇಕ್ಕಟ್ಟಿನ ಪರಿಸ್ಥಿತಿಗೆ ಒಳಗಾಯಿತು.
 
ಆಳುವ ಪಕ್ಷದ ಸಾಲಿನ ಚೊಚ್ಚಲ ಸದಸ್ಯರಾಗಿರುವ ನಿಶಿಕಾಂತ್ ದುಬೆ, ನಾವು ಅಲ್ಲಿಂದ ಕಪ್ಪು ಹಣ ವಾಪಸ್ ತರಲು ಸಾಧ್ಯವಿಲ್ಲ. ಏಕೆಂದರೆ ಜನರು ಟ್ರಸ್ಟ್‌ಗಳನ್ನು ಮಾಡಿ ಅದರಲ್ಲಿ ಹಣವನ್ನು ಇರಿಸಿದ್ದಾರೆ.ಈ ಟ್ರಸ್ಟ್‌ಅನ್ನು  ಸ್ವಿಸ್ ಪೌರರು ಹೊಂದಿದ್ದಾರೆ ಎಂದು ಹೇಳಿದರು.
 
ನಾವು ಹಣ ಮತ್ತು ಹೆಸರಿಗಾಗಿ  ಸ್ವಿಸ್ ಅಧಿಕಾರಿಗಳನ್ನು ಕೇಳುವಾಗ ಭಾರತೀಯರ ಹೆಸರನ್ನು ಕೋರುತ್ತೇವೆ. ಆದರೆ ಟ್ರಸ್ಟೀಗಳ ಹೆಸರನ್ನು ಕೇಳುವ  ಪ್ರಶ್ನೆಯೇ ಇಲ್ಲ. ನಾವು ಹಾಗೆ ಹೇಳದಿದ್ದರೆ ಸ್ವಿಸ್‌ನಿಂದ ಹಣವನ್ನು ವಾಪಸು ತರುವುದು ಹೇಗೆ ಎಂದು ಪ್ರಶ್ನಿಸಿದರು.  ನರೇಂದ್ರ ಮೋದಿ ಸರ್ಕಾರ ಕಳೆದ ತಿಂಗಳು ಭ್ರಷ್ಟಾಚಾರ ಮತ್ತು ಕಪ್ಪುಹಣದ ಪಿಡುಗನ್ನು ದೇಶದ ತೊಲಗಿಸಲು ನಿರ್ಧರಿಸಿದ್ದೇವೆ ಎಂದು ಸಂಸತ್ತಿನಲ್ಲಿ ಪ್ರತಿಪಾದಿಸಿತ್ತು.

ಈ ದಿಕ್ಕಿನಲ್ಲಿ ಮೊದಲ ಹೆಜ್ಜೆಯಾಗಿ, ವಿದೇಶದಲ್ಲಿ ಸಂಗ್ರಹವಾದ ಕಪ್ಪುಹಣ ಬಯಲು ಮಾಡಲು ಎಸ್‌ಐಟಿಯನ್ನು ಸರ್ಕಾರ ಈಗಾಗಲೇ ರಚಿಸಿದೆ ಮತ್ತು ವಿದೇಶಿ ಸರ್ಕಾರಗಳೊಂದಿಗೆ ಸಕ್ರಿಯ ಮಾತುಕತೆ ನಡೆಯಲಿದೆ ಎಂದು ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಭಾಷಣ ಮಾಡುತ್ತಾ ನರೇಂದ್ರ ಮೋದಿ ಸರ್ಕಾರದ ಮುನ್ನೋಟವನ್ನು ಬಿಚ್ಚಿಟ್ಟಿದ್ದರು. 

ವೆಬ್ದುನಿಯಾವನ್ನು ಓದಿ