ಹೌದು, ವಿದೇಶಿ ಬ್ಯಾಂಕ್‌ಗಳಲ್ಲಿ ಕಪ್ಪು ಹಣ ಹೊಂದಿದ್ದೇವೆ ಎಂದ 139 ಉದ್ಯಮಿಗಳು

ಭಾನುವಾರ, 26 ಅಕ್ಟೋಬರ್ 2014 (12:33 IST)
ಸ್ವಿಸ್‌ ಬ್ಯಾಂಕುಗಳಲ್ಲಿ ಕಪ್ಪು ಹಣ ಇರುವ ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸಲು ಸರ್ಕಾರ ಹಿಂದೆ- ಮುಂದೆ ನೋಡುತ್ತಿರುವಾಗಲೇ, 'ವಿದೇಶಿ ತೆರಿಗೆ ಸ್ವರ್ಗ'ದಲ್ಲಿ ಖಾತೆ ಹೊಂದಿರುವುದನ್ನು ದೃಢಪಡಿಸಿ 136 ಮಂದಿ ದಂಡ ಕಟ್ಟಲು ಮುಂದೆ ಬಂದಿದ್ದಾರೆ. 
 
ಎಚ್‌ಎಸ್‌ಬಿಸಿ ಬ್ಯಾಂಕಿನ ಸ್ವಿಜರ್ಲೆಂಡ್‌ನ‌ ಜಿನೇವಾ ಶಾಖೆಯಲ್ಲಿ ಖಾತೆ ಹೊಂದಿರುವ 628 ಭಾರತೀಯರು ಅಥವಾ ಭಾರತೀಯ ಸಂಸ್ಥೆಗಳ ಪೈಕಿ 136 ವ್ಯಕ್ತಿಗಳು ತಾವು ಖಾತೆ ಹೊಂದಿರುವ ವಿಚಾರವನ್ನು ಆದಾಯ ತೆರಿಗೆ ಇಲಾಖೆ ಬಳಿ ಒಪ್ಪಿಕೊಂಡಿದ್ದಾರೆ. ಆ ಖಾತೆ ಇನ್ನೂ ಅಸ್ತಿತ್ವದಲ್ಲಿರುವ ಮಾಹಿತಿ ತಮಗೆ ತಿಳಿದಿರಲಿಲ್ಲ ಎಂದೂ ಹೇಳಿದ್ದಾರೆ. 
 
ಆದಾಯವನ್ನು ಮುಚ್ಚಿಟ್ಟ ಕಾರಣಕ್ಕೆ ಪಾವತಿಸಬೇಕಾಗಿರುವ ತೆರಿಗೆ ಹಾಗೂ ದಂಡವನ್ನು ಕಟ್ಟುವುದಾಗಿಯೂ ತಿಳಿಸಿದ್ದಾರೆ. ಈ 136 ಖಾತೆಗಳ ಪೈಕಿ ಬಹುತೇಕವುಗಳಲ್ಲಿ ಶೂನ್ಯ ಮೊತ್ತವಿದೆ ಎಂದು ಕಪ್ಪು ಹಣದ ತನಿಖೆಯಲ್ಲಿ ತೊಡಗಿರುವ ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಆಂಗ್ಲಪತ್ರಿಕೆಯೊಂದು ವರದಿ ಮಾಡಿದೆ. 
 
ಎಚ್‌ಎಸ್‌ಬಿಸಿ ಬ್ಯಾಂಕಿನ ಖಾತೆದಾರರ ಮಾಹಿತಿಯನ್ನು 2006ರಲ್ಲಿ ಅಲ್ಲಿನ ನೌಕರನೊಬ್ಬ ಕಳವು ಮಾಡಿದ್ದ. ಆ ಪಟ್ಟಿಯನ್ನು 2011ರಲ್ಲಿ ಭಾರತಕ್ಕೆ ಫ್ರಾನ್ಸ್‌ ಹಸ್ತಾಂತರಿಸಿತ್ತು. 
 
ಇಬ್ಬರು ಉದ್ಯಮಿಗಳ ಖಾತೆಯಲ್ಲಿ 110 ಕೋಟಿ 
 
ಸ್ವಿಜರ್ಲೆಂಡ್‌ನ‌ ಎಚ್‌ಎಸ್‌ಬಿಸಿ ಬ್ಯಾಂಕಿನಲ್ಲಿ ಖಾತೆ ಹೊಂದಿರುವ 628 ಭಾರತೀಯರ ಪೈಕಿ 418 ಮಂದಿಯ ಹೆಸರು, ವಿಳಾಸ ತಾಳೆಯಾಗಿದೆ. ಅದರಲ್ಲಿ 12 ಖಾತೆಗಳು ಕೋಲ್ಕತಾದವರಿಗೆ ಸೇರಿದವಾಗಿವೆ. ಆ ಪೈಕಿ ಆರು ಮಂದಿ ತಾವು ಖಾತೆ ಹೊಂದಿರುವ ವಿಚಾರವನ್ನು ದೃಢಪಡಿಸಿದ್ದಾರೆ. ಇದಲ್ಲದೆ ದೇಶದ ಇಬ್ಬರು ಕೈಗಾರಿಕೋದ್ಯಮಿಗಳು ಎಚ್‌ಎಸ್‌ಬಿಸಿ ಜಿನೇವಾ ಶಾಖೆಯಲ್ಲಿ 110 ಕೋಟಿ ರೂ. ಹಣ ಹೊಂದಿರುವ ವಿಚಾರ ಬಯಲಾಗಿದೆ. ಖಾತೆದಾರರ ಪಟ್ಟಿಯಲ್ಲಿ ಮೆಹ್ತಾ ಹಾಗೂ ಪಟೇಲ್‌ ಎಂಬ ಉಪನಾಮಗಳು ಸರ್ವೇಸಾಮಾನ್ಯದಂತಿವೆ ಎಂದು ಪತ್ರಿಕೆ ವರದಿ ಮಾಡಿದೆ. 
 

ವೆಬ್ದುನಿಯಾವನ್ನು ಓದಿ