ಭಯೋತ್ಪಾದನೆಯನ್ನು ಎಲ್ಲರೂ ಸೇರಿ ಮಟ್ಟ ಹಾಕೋಣ: ರಾಜನಾಥ್ ಸಿಂಗ್

ಗುರುವಾರ, 30 ಜುಲೈ 2015 (16:40 IST)
ಇಂದು ನಡೆಯುತ್ತಿರುವ ರಾಜ್ಯಸಭಾ ಕಲಾಪದಲ್ಲಿ ಪಂಜಾಬ್‌ನ ಗುರುದಾಸ್‌ಪುರದ ಉಗ್ರರ ಅಟ್ಟಹಾಸ ಪ್ರಕರಣವು ಪ್ರಸ್ತಾಪವಾಗಿದ್ದು, ವಿಪಕ್ಷಗಳ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ಹರಿ ಹಾಯ್ದಿದ್ದಾರೆ. 
 
ಹೌದು, ಪಂಜಾಬ್ ನಲ್ಲಿ ನಡೆದ ಉಗ್ರರ ಅಟ್ಟಹಾಸ ಪ್ರಕರಣದ ಬಗ್ಗೆ ಚರ್ಚೆ ನಡೆಸಲು ಅವಕಾಶ ಕೋರಿ  ವಿಪಕ್ಷ ಸದಸ್ಯರು ಆಗ್ರಹಿಸಿದರು. ಆದರೆ ಸ್ಪೀಕರ್ ಇದಕ್ಕೆ ಅವಕಾಶ ನೀಡಲು ನಿರಾಕರಿಸಿದರು. ಆದರೆ ಪಟ್ಟು ಬಿಡ ಸದಸ್ಯರು, ಆ ಸಂಬಂಧ ಸರ್ಕಾರ ಸೂಕ್ತ ಹೇಳಿಕೆ ದಾಖಲಿಸಬೇಕು ಎಂದು ಪಟ್ಟು ಹಿಡಿದವು. ಈ ಹಿನ್ನೆಲೆಯಲ್ಲಿ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವ ರಾಜನಾಥ್, ಭಯೋತ್ಪಾದನೆಯನ್ನು ಎಲ್ಲರೂ ಸೇರಿ ಧ್ವಂಸಗೊಳಿಸಬೇಕಿದೆ. ಆದ್ದರಿಂದ ಸರ್ಕಾರದೊಂದಿಗೆ ತಾವೂ ಕೈ ಜೋಡಿಸಿ ಎಂದು ಹೇಳುವ ಮೂಲಕ ತಪ್ಪಿಸಿಕೊಳ್ಳಲು ಯತ್ನಿಸಿದರು. ಆದರೆ ಸಚಿವರ ಈ ಹೇಳಿಕೆಗೆ ಒಪ್ಪದ ಸದಸ್ಯರು ಸದನದಲ್ಲಿ ಗದ್ದಲ ಎಬ್ಬಿಸಿದರು. ಇದರಿಂದ ಉಪಸಭಾಧ್ಯಕ್ಷ ಪಿ.ಜೆ.ಕುರಿಯನ್ ಕಲಾಪವನ್ನು ಮುಂದೂಡಿದರು. 
 
ಇನ್ನು ಪಾಕಿಸ್ತಾನದಿಂದ ದೇಶದ ಒಳಕ್ಕೆ ನುಸುಳಿದ್ದ ಮೂವರು ಉಗ್ರರು ಕಳೆದ ಮೂರುದಿನಗಳ ಹಿಂದಷ್ಟೇ ಇಲ್ಲಿನ ದೀನಾನಗರ್ ಪೊಲೀಸ್ ಠಾಣೆಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿ ಅಮಾನುಷವಾದಂತಹ ಕೃತ್ಯ ಎಸಗಿದ್ದರು. ಪರಿಣಾಮ ಓರ್ವ ಎಸ್‌ಪಿ ಸೇರಿದಂತೆ 7 ಮಂದಿ ಪೊಲೀಸರು ಹಾಗೂ ನಾಗರೀಕರು ಸೇರಿ ಒಟ್ಟು 13 ಮಂದಿ ಸಾವನ್ನಪ್ಪಿದ್ದರು. ಆದರೆ ಪ್ರತಿಯಾಗಿ ದಾಳಿ ನಡೆಸಿದ್ದ ದೇಶೀಯ ರಕ್ಷಣಾಪಡೆಯ ಯೋಧರು ಹಾಗೂ ಪಂಜಾಬ್ ಪೊಲೀಸರು, ಜಂಟಿ ಕಾರ್ಯಾಚರಣೆ ನಡೆಸಿ ಮೂವರೂ ಉಗ್ರರನ್ನು ಸದೆಬಡಿದಿದ್ದರು. 

ವೆಬ್ದುನಿಯಾವನ್ನು ಓದಿ