ದಾವುದ್ ಇಬ್ರಾಹಿಂ ನಮ್ಮ ದೇಶದಲ್ಲಿ ವಾಸಿಸುತ್ತಿಲ್ಲ: ಪಾಕಿಸ್ತಾನ

ಗುರುವಾರ, 4 ಫೆಬ್ರವರಿ 2016 (19:18 IST)
ಭಾರತದ ಮೋಸ್ಟ್ ವಾಂಟೆಡ್‌ ಭೂಗತ ದೊರೆ ದಾವುದ್ ಇಬ್ರಾಹಿಂ ಪಾಕಿಸ್ತಾನದಲ್ಲಿಲ್ಲ. ದಾವುದ್ ಎಲ್ಲಿದ್ದಾನೆ ಎನ್ನುವುದು ತಿಳಿದಿಲ್ಲ ಎನ್ನುವುದನ್ನು ಭಾರತದ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ ಎಂದು ಪಾಕಿಸ್ತಾನ ಹೇಳಿಕೆ ನೀಡಿದೆ.
 
1993ರ ಮುಂಬೈ ಸರಣಿ ಸ್ಫೋಟದ ರೂವಾರಿ ದಾವುದ್ ಇಬ್ರಾಹಿಂ, ಸರಣಿ ಸ್ಫೋಟದ ನಂತರ ಭಾರತದಿಂದ ಪರಾರಿಯಾಗಿ ಪಾಕಿಸ್ತಾನದಲ್ಲಿ ನೆಲೆಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಆದರೆ, ಪಾಕಿಸ್ತಾನ ಸದಾ ನಿರಾಕರಿಸುತ್ತಲೇ ಬಂದಿದೆ.
 
ದಾವುದ್ ಇಬ್ರಾಹಿಂ ವಿರುದ್ಧ ಇಂಟರ್‌ಪೋಲ್ ಬಂಧನದ ವಾರೆಂಟ್ ಹೊರಡಿಸಿದ ಹಿನ್ನೆಲೆಯಲ್ಲಿ, ಇಂಗ್ಲೆಂಡ್‌ನಲ್ಲಿರುವ ದಾವುದ್ ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು ಹಲವಾರು ಖಾತೆಗಳನ್ನು ವಶಕ್ಕೆ ತೆಗೆದುಕೊಂಡು ಆರ್ಥಿಕ ನಿರ್ಭಂಧ ಹೇರಲಾಗಿದೆ. 
 
ಇಂಗ್ಲೆಂಡ್‌ನಲ್ಲಿರುವ ಬ್ಯಾಂಕ್ ಖಾತೆಗಳಿಗೆ ದಾವುದ್ ಪಾಕಿಸ್ತಾನದ ನಾಲ್ಕು ವಿಳಾಸಗಳನ್ನು ನೀಡಿದ್ದಾನೆ. ಅದರಲ್ಲಿ ನಾಲ್ಕು ವಿಳಾಸಗಳು ಕರಾಚಿ ನಗರಕ್ಕೆ ಸಂಬಂದಿಸಿದ್ದಾಗಿವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
 
ಮುಂಬೈ ಮೂಲದ ಗ್ಯಾಂಗ್‌ಸ್ಟರ್ ದಾವುದ್, ಪಾಸ್‌ಪೋರ್ಟ್‌ನಲ್ಲಿ ಭಾರತೀಯ ನಾಗರಿಕ ಎಂದು ನಮೂದಿಸಿದ್ದಾನೆ ಎನ್ನಲಾಗಿದೆ. ಪಾಕಿಸ್ತಾನದ ಪಾಸ್‌ಪೋರ್ಟ್‌ಗಳಲ್ಲಿ ಪಾಕ್ ನಾಗರಿಕ ಎಂದು ನಮೂದಿಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ