ನಮಗೆ ಕಲಿಯುವ ಆಸಕ್ತಿಯಿದೆ ಆದ್ರೆ ಶಿಕ್ಷಕರಿಲ್ಲ: ರಾಜಸ್ಥಾನ ವಿದ್ಯಾರ್ಥಿನಿಯರ ಅಳಲು

ಶುಕ್ರವಾರ, 24 ಜುಲೈ 2015 (20:49 IST)
ಶಾಲೆಯಲ್ಲಿ ಶಿಕ್ಷಕರ ಕೊರತೆಯನ್ನು ವಿರೋಧಿಸಿ ಸುಮಾರು 1300 ಶಾಲಾ ವಿದ್ಯಾರ್ಥಿನಿಯರು ಘೋಷಣೆಗಳನ್ನು ಕೂಗುತ್ತಾ ರಸ್ತೆಯ ಮೇಲೆ ಪ್ರತಿಭಟನೆ ನಡೆಸಿದ್ದಾರೆ. 
 
ನಾವು ಕಲಿಯಲು ಬಯಸುತ್ತೇವೆ. ಆದರೆ ನಮಗೆ ಕಲಿಸುವ ಶಿಕ್ಷಕರಿಲ್ಲ ಎನ್ನುವ ಘೋಷಣೆಗಳನ್ನು ಕೂಗುತ್ತಾ ಮೂರು ಗ್ರಾಮಗಳಲ್ಲಿ ಸಂಚರಿಸುವ ಮೂಲಕ ಸರಕಾರಕ್ಕೆ ಚಾಟಿ ಏಟು ಬೀಸುವ ಪ್ರಯತ್ನ ಮಾಡಿದರು.
 
ರಾಜಸ್ಥಾನದ ರಾಜಧಾನಿ ಜೈಪುರ್‌ದಿಂದ 270 ಕಿ.ಮೀ ದೂರದಲ್ಲಿರುವ  ರಾಜಸ್‌ಮಂಡ್ ಜಿಲ್ಲೆಯ ದೇವರ್ ಗ್ರಾಮದಲ್ಲಿ 308 ವಿದ್ಯಾರ್ಥಿನಿಯರಿಗೆ ಕೇವಲ ನಾಲ್ಕು ಮಂದಿ ಶಿಕ್ಷಕರಿದ್ದು, ಇನ್ನೂ 16 ಶಿಕ್ಷಕರ ಅಗತ್ಯವಿದೆ. ಆದರೆ, ಸರಕಾರ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.  
 
ನೆರೆಯ ಗ್ರಾಮವಾದ ಬರಾರ್‌ನಲ್ಲಿ 12ನೇ ತರಗತಿಯವರೆಗೆ ಓದುವ ಅವಕಾಶವಿದೆ. ಆದರೆ, 300 ವಿದ್ಯಾರ್ಥಿಗಳಿಗೆ ಕೇವಲ ಮೂರು ಶಿಕ್ಷಕರಿದ್ದಾರೆ. ಈ ಶಾಲೆಗೆ 27 ಶಿಕ್ಷಕರ ಅಗತ್ಯವಿದೆ ಎನ್ನುವುದು ವಿದ್ಯಾರ್ಥಿನಿಯರ ಆರೋಪವಾಗಿದೆ.
 
ಭೀಮ್ ಪಟ್ಟಣದಲ್ಲಿ 700 ವಿದ್ಯಾರ್ಥಿಗಳಿಗೆ ಕೇವಲ ನಾಲ್ಕು ಶಿಕ್ಷಕರಿದ್ದು, ಕಳೆದ ಎಂಟು ವರ್ಷಗಳಿಂದ ಪ್ರಾಂಶುಪಾಲರ ನೇಮಕ ಕೂಡಾ ಆಗಿಲ್ಲ ಎನ್ನುವುದು ವಿದ್ಯಾರ್ಥಿನಿಯರ ಅಳಲಾಗಿದೆ. 
 
ಶಾಲೆಗಳಲ್ಲಿ ಶಿಕ್ಷಕರಿಲ್ಲವಾದರೆ ನಾವು ಪರೀಕ್ಷೆಗಳಲ್ಲಿ ಪಾಸಾಗುವದಾದರೂ ಹೇಗೆ? ಒಂದು ಬಾರಿ ನಾವು ಫೇಲ್ ಆದಲ್ಲಿ ಪೋಷಕರು ಮನೆಯಲ್ಲಿರು ಎಂದು ಹೇಳುತ್ತಾರೆ. ನಂತರ ಬೇಗನೆ ನಮ್ಮ ವಿವಾಹ ಮಾಡಿ ಕೈತೊಳೆದುಕೊಳ್ಳುತ್ತಾರೆ ಎಂದು ವಿದ್ಯಾರ್ಥಿನಿಯೊಬ್ಬಳು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾಳೆ. 
 

ವೆಬ್ದುನಿಯಾವನ್ನು ಓದಿ